ಜಿಲ್ಲೆ

ವಿಶ್ವಕರ್ಮರು ಭಾರತೀಯ ಸಂಸ್ಕೃತಿಯ ಪ್ರತೀಕ: ಕೆ.ಜಿ.ಬೋಪಯ್ಯ

ಮಡಿಕೇರಿ: ವಿಶ್ವಕರ್ಮ ಎಂದರೆ ಸೃಷ್ಟಿಯ ಕರ್ತ. ಸೃಷ್ಟಿಯು ದೇವತೆಯ ಮುಹೂರ್ತ ರೂಪವಾಗಿದೆ. ಸೃಷ್ಟಿಕರ್ತ ಮೂಲ ವಿಶ್ವಕರ್ಮವಾಗಿದೆ. ಆ ನಿಟ್ಟಿನಲ್ಲಿ ವಿಶ್ವಕರ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಚಾರಿತ್ರಿಕ ಹಿನ್ನೆಲೆ ಇದೆ. ವೇದ, ಋಗ್ವೇದ ಕಾಲದಿಂದಲೂ ಸಮಾಜಕ್ಕೆ ವಿಶ್ವಕರ್ಮರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮ ಸಮಾಜವು ಹಿಂದೂ ಸಮಾಜಕ್ಕೆ ಅನೇಕ ಕೊಡುಗೆ ನೀಡಿದೆ. ಅನೇಕತೆಯಲ್ಲಿ ಏಕತೆ ಹೊಂದಿರುವುದೇ ವೈಶಿಷ್ಟ್ಯವಾಗಿದೆ ಎಂದು ನುಡಿದರು.


ಸಮಾಜದಲ್ಲಿ ಅಭಿವೃದ್ಧಿ ಮತ್ತು ಬದಲಾವಣೆ ಅನಿವಾರ್ಯ. ಆ ನಿಟ್ಟಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಶಾಸಕರು ಹೇಳಿದರು.


ನರೇಂದ್ರ ಮೋದಿ ಅವರು ಹುಟ್ಟಿದ ದಿನದಂದು ವಿಶ್ವಕರ್ಮ ಜಯಂತಿ ಆಚರಿಸುತ್ತಿರುವುದು ವಿಶಿಷ್ಟವಾಗಿದೆ. ಇಡೀ ವಿಶ್ವದಲ್ಲಿ ಸಮರ್ಥ ಆಡಳಿತವನ್ನು ಪ್ರಧಾನಮಂತ್ರಿ ಅವರು ನೀಡುತ್ತಿದ್ದಾರೆ. ಸ್ವಾವಲಂಬಿ ಭಾರತ ಆಗಬೇಕು. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂದು ವಿವರಿಸಿದರು.


ಕೋಟೇಕಾರು ಗೋಸೇವಾಶ್ರಮ ಟ್ರಸ್ಟ್‌ನ ಅಧ್ಯಕ್ಷ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಮಾತನಾಡಿ, ವಿಶ್ವ ಎಂದರೆ ಜಗತ್ತು. ಆದ್ದರಿಂದ ವಿಶ್ವಕರ್ಮ ಜಗತ್ತು, ಜಗತ್ತನ್ನು ಸೃಷ್ಟಿ ಮಾಡಿದವರೇ ವಿಶ್ವಕರ್ಮ. ಯುಗ ಯುಗ ಕಳೆದರೂ ಸಮಾಜ ಬದಲಾವಣೆ ಹೊಂದುತ್ತದೆ. ವಿಶ್ವಕರ್ಮವು ಒಂದು ಜಾತಿ ಸಮುದಾಯಕ್ಕೆ ಸೇರಿದಲ್ಲ. ಎಲ್ಲರೂ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತದ್ದು ಎಂದರು.


ಜಗತ್ತಿಗೆ ಎಲ್ಲವನ್ನೂ ನೀಡಿದ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ವಿಶ್ವಕರ್ಮರು ಕುಲಕಸುಬು ಮಾಡುವುದರೊಂದಿಗೆ ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಬದುಕು ನಡೆಸುವಂತಾಗಬೇಕು ಎಂದು ಹೇಳಿದರು.


ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ದೇವದಾಸ್, ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕ ಎಚ್.ಎನ್.ಸುಬ್ರಮಣಿ, ತಹಶೀಲ್ದಾರ್ ಪಿ.ಎಸ್.ಮಹೇಶ್, ವಿಶ್ವಕರ್ಮ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಬಿ.ಜಗದೀಶ್ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜು, ವಿಶ್ವಕರ್ಮ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ವಿದ್ಯಾಲತಾ ಇತರರು ಇದ್ದರು.