ದೇವದುರ್ಗ: ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಒತ್ತಾಯಿಸಿ ವಿಶ್ವಕರ್ಮ ಸಮುದಾಯದವರು ಪಟ್ಟಣದ ಮಿನಿವಿಧಾನಸೌಧ ಮುಂಭಾಗ ಬುಧವಾರ ಪ್ರತಿಭಟಿಸಿದರು.
ರಾಯಚೂರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದೆ. ಜಿಲ್ಲೆಯಲ್ಲಿ ಅಪಾರವಾದ ನೈಸರ್ಗಿಕ ಸಂಪತ್ತು ಹೊಂದಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಕಂಡಿಲ್ಲ. ಕೃಷ್ಣಾ ಹಾಗೂ ತುಂಗಭದ್ರಾ ನದಿ ಸಮೃದ್ಧವಾಗಿ ಹರಿಯುತ್ತಿದ್ದರೂ, ರೈತರ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಇದರಿಂದ ಕೃಷಿಯಿಂದ ವಿಮೂಖರಾಗಿ ಯುವಕರು, ರೈತರು, ಕೂಲಿಕಾರರು ಗುಳೆ ಹೋಗುತ್ತಿದ್ದಾರೆ ಎಂದು ದೂರಿದರು.
ಏಮ್ಸ್ ಮಂಜೂರು ಮಾಡುವುದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ. ಜತೆಗೆ ಆರೋಗ್ಯ ಸೇವೆ, ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲಿದೆ. ಈ ಹಿಂದೆ ಐಐಟಿಯಲ್ಲಿ ಆದ ಅನ್ಯಾಯ ಸರಿಪಡಿಸಲು ಸರ್ಕಾರ ಏಮ್ಸ್ ಮಂಜೂರು ಮಾಡಬೇಕು. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಅಧ್ಯಕ್ಷ ರಮೇಶ್ ಪತ್ತಾರ್, ಮಲ್ಲಪ್ಪ ವಿಶ್ವಕರ್ಮ, ಕಾಳಪ್ಪ ಪತ್ತಾರ್, ಗಂಗಾಧರ್ ಪತ್ತಾರ್, ದೇವೇಂದ್ರಪ್ಪ, ಗುರುರಾಜ್, ಪ್ರಾಣೇಶ್, ಶಿವಕುಮಾರ್, ಚಿತ್ರಶೇಖರ್, ಕಸಾಪ ಮಾಜಿ ಅಧ್ಯಕ್ಷ ಎಚ್.ಶಿವರಾಜ್, ರಂಗಪ್ಪ ಕೋತಿಗುಡ್ಡ, ಮಲ್ಲಪ್ಪ ಅಜ್ಜನಿಗೆ, ರಮೇಶ್ ಇತರರಿದ್ದರು.