ರಾಮದುರ್ಗ: ಪಂಚಕಲೆಗಳನ್ನು ಹೊಂದಿ ಸಮಾಜಕ್ಕೆ ಕಲಾಕೃತಿಗಳ ಮೂಲಕ ವಿಶೇಷ ಮೆರಗು ನೀಡಲು ಕಾರಣೀಕರ್ತರಾದ ವಿಶ್ವಕರ್ಮ ಸಮುದಾಯದ ಜನ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದರು. ಕರೊನಾ ಮಹಾಮಾರಿಯಿಂದ ಅವರ ಬದುಕು ಬೀದಿಗೆ ಬಂದಿದೆ. ಉಭಯ ಸರ್ಕಾರಗಳು ಸಮುದಾಯದ ಜನತೆಯ ನೆರವಿಗೆ ಮುಂದಾಗಬೇಕು ಎಂದು ವಿಶ್ವಕರ್ಮ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಕೃಷ್ಣ ಬಡಿಗೇರ ಕೋರಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದೇವಶಿಲ್ಪಿ ವಿಶ್ವಕರ್ಮರ ಜಯಂತಿಯಲ್ಲಿ ಮಾತನಾಡಿ, ವಿಶ್ವಕರ್ಮರು ಪ್ರಥಮ ಶಿಲ್ಪಿಗಳು ಅವರು ಅನೇಕ ದೇವಸ್ಥಾನ, ಪುಷ್ಪಕ ವಿಮಾನ, ಶಿವನ ತ್ರಿಶೂಲ, ಬ್ರಹ್ಮಾಂಡವನ್ನು ನಿರ್ಮಾಣ ಮಾಡಿದವರು. ವಿಶ್ವಕರ್ಮ ಸಮುದಾಯ ಭಾರತೀಯ ಕಲೆ ಉಳಿಸಿ, ಬೆಳೆಸುವ ಮೂಲಕ ಇತಿಹಾಸ ರಕ್ಷಣೆಗೆ ಅಗತ್ಯ ಸಹಕಾರ ನೀಡಿದೆ ಎಂದರು.
ಕಂದಾಯ ನಿರೀಕ್ಷಕ ಶಿವು ಗೊರವಿನಕೊಳ್ಳ ಮಾತನಾಡಿದರು. ಮುತ್ತು ಕಮ್ಮಾರ, ಪಾಂಡುರಂಗ ಪತ್ತಾರ, ಉಮೇಶ ಪತ್ತಾರ, ನಾಗಪ್ಪ ಸಾಲಿ, ಹನುಮಂತ ಪತ್ತಾರ, ಪ್ರಲ್ಲಾದ ಬಡಿಗೇರ, ಉದಯ ಚೊಳಚಗುಡ್ಡ, ರೇಖಾ ಪತ್ತಾರ, ಉಪತಹಸೀಲ್ದಾರ್ ರವಿ ಮಡಿವಾಳರ, ಎ.ಎಚ್.ದಾಸರ, ಶಿರಸ್ತೇದಾರ ಅನ್ನಪೂರ್ಣಾ ಬಡಿಗೇರ ಸೇರಿದಂತೆ ಇತರರಿದ್ದರು.
ಬೆಟಗೇರಿ ವರದಿ: ದೇವಶಿಲ್ಪಿ ವಿಶ್ವಕರ್ಮನು ವಿಶ್ವ, ಬ್ರಹ್ಮಾಂಡದ ಸೃಷ್ಟಿಕರ್ತನಾಗಿದ್ದಾನೆ ಎಂದು ವಿಶ್ವಕರ್ಮ ಸಮುದಾಯದ ಯುವ ಮುಖಂಡ ಶಿವರಾಜ ಪತ್ತಾರ ಹೇಳಿದ್ದಾರೆ. ಗ್ರಾಮದ ವಿಶ್ವಕರ್ಮ ಸಮುದಾಯದ ವತಿಯಿಂದ ಸ್ಥಳೀಯ ದ್ಯಾಮವ್ವದೇವಿ ದೇವಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು. ಸಂಗಯ್ಯ ಹಿರೇಮಠ, ಮಲ್ಲಪ್ಪ ಕನೋಜಿ, ಮಹಾದೇವಪ್ಪ ಹಡಪದ, ಸಂಜು ಪಣದಿ, ಸುರೇಶ ಬಡಿಗೇರ, ವಿಠ್ಠಲ ಬಡಿಗೇರ ಮತ್ತಿತರರು ಇದ್ದರು.