ಮಂಗಳೂರು ವಿಶ್ವ ಕೊಂಕಣಿ ಕೇಂದ್ರದಲ್ಲಿ ಭಾನುವಾರ ಹಿರಿಯ ಕಲಾವಿದ ರಮಾನಂದ ರಾಯ್ಕರ್, ಲೇಖಕ ಡಾ.ಪ್ರಕಾಶ್ ಪರಿಯೆಂಕಾರ್, ಕವಿ ಆರ್.ಎಸ್ ಭಾಸ್ಕರ್, ಮೆಟಮೋರ್ಫಸ್ ಸೇವಾ ಸಂಸ್ಥೆಯ ಶಕುಂತಲಾ ಎ. ಭಂಢಾರಕಾರ್, ಮಂಜೇಶ್ವರದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ನ ಜೊಸೆಫ್ ಕ್ರಾಸ್ತಾ, ಲೇಖಕ ರಮೇಶ ಲಾಡ್ ಹಾಗೂ ರಂಗಭೂಮಿ ಕಲಾವಿದ ಶ್ರೀನಿವಾಸ ರಾವ್ (ಕಾಸರಗೋಡು ಚಿನ್ನಾ) ಅವರಿಗೆ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಮಾಡಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಯರಾಜ್ ಅಮಿನ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮುಂತಾದವರು ಉಪಸ್ಥಿತರಿದ್ದರು.  
ಜಿಲ್ಲೆ

ಬಹುಸಂಸ್ಕೃತಿ, ಜೀವನ ಪದ್ಧತಿಯ ಯಶೋಗಾಥೆ- ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರೊ.ಜಯರಾಜ್ ಅಮೀನ್ ಶ್ಲಾಘನೆ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ಉದ್ಯಮ, ಸಾಹಿತ್ಯ, ಕಲೆ, ಸೇವೆ ಸಹಿತ ವಿವಿಧ ಕ್ಷೇತ್ರಗಳಿಗೆ ಕೊಂಕಣಿಗರು ದೇಶ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದೆ. ವಿಶ್ವ ಕೊಂಕಣಿ ಕೇಂದ್ರದ ಸಾಧನೆ ಕಂಡು ಬೆರಗಾಗಿದ್ದೇನೆ. ಕೊಂಕಣಿ ಭಾಷೆ ಮಾತನಾಡುವ ವಿವಿಧ, ಧರ್ಮ, ಜಾತಿಯ ಬಹು ಸಂಸ್ಕೃತಿ, ಜೀವನ ಪದ್ಧತಿಯ ಜನರು ವಿಶ್ವ ಕೊಂಕಣಿ ಕೇಂದ್ರ ಎನ್ನುವ ಒಂದು ಕೊಡೆಯಡಿ ಇಲ್ಲಿ ಒಂದಾಗಿದ್ದಾರೆ; ಯಶಸ್ಸಿನ ಪಥ ಕಂಡುಕೊಂಡಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಯರಾಜ್ ಅಮಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ಭಾನುವಾರ ವಿವಿಧ ಕ್ಷೇತ್ರಗಳ ಏಳು ಸಾಧಕರಿಗೆ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಬಳಿಕ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬಸ್ತಿ ವಾಮನ ಶೆಣೈ ಅವರಂತಹ ನಿಸ್ವಾರ್ಥ ವ್ಯಕ್ತಿಗಳ ದೂರದೃಷ್ಟಿಯ ಫಲವಾಗಿ ಸ್ಥಾಪನೆಯಾದ ವಿಶ್ವ ಕೊಂಕಣಿ ಕೇಂದ್ರ ಇಂದು ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ಅವರು ಹೇಳಿದರು.
ಕೊಂಕಣಿ ಭಾಷೆ, ಸಂಗೀತ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಗೋವಾದ ಹಿರಿಯ ಕೊಂಕಣಿ ಕಲಾವಿದ ರಮಾನಂದ ರಾಯ್ಕರ್ ಅವರಿಗೆ ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದಿಂದ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪುರಸ್ಕಾರ ಪ್ರದಾನ ಮಾಡಲಾಯಿತು.
ಗೋವಾದ ಕೊಂಕಣಿ ಲೇಖಕ ಡಾ.ಪ್ರಕಾಶ್ ಪರಿಯೆಂಕಾರ್ ಅವರ ’ಪೂರಣ್’ ಪುಸ್ತಕಕ್ಜೆ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ ಹಾಗೂ ಕೇರಳದ ಕೊಂಕಣಿ ಕವಿ ಆರ್.ಎಸ್ ಭಾಸ್ಕರ್ ಅವರ ’ಚೈತ್ರ ಕವಿತಾ’ ಕೊಂಕಣಿ ಕವನ ಸಂಕಲನಕ್ಕೆ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಮೆಟಮೋರ್ಫಸ್ ಸೇವಾ ಸಂಸ್ಥೆಯ ಶಕುಂತಲಾ ಎ. ಭಂಢಾರಕಾರ್ ಹಾಗೂ ಮಂಜೇಶ್ವರದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ನ ಜೊಸೆಫ್ ಕ್ರಾಸ್ತಾ ಅವರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ, ಗೋವಾದ ಲೇಖಕ ರಮೇಶ ಲಾಡ್ ಅವರಿಗೆ ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ, ರಂಗಭೂಮಿ ಕಲಾವಿದ ಶ್ರೀನಿವಾಸ ರಾವ್ (ಕಾಸರಗೋಡು ಚಿನ್ನಾ) ಅವರಿಗೆ ಪಿ.ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳು ತಲಾ 1 ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡಿದೆ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿದರು. ಉಪಾಧ್ಯಕ್ಷರಾದ ಗಿಲ್ಬರ್ಟ್ ಡಿಸೋಜ, ಡಾ.ಕಿರಣ್ ಐದೆಕೋಶಾಧಿಕಾರಿ ಬಿ.ಆರ್.ಭಟ್, ಟ್ರಸ್ಟಿಗಳಾದ ಟ್ರಸ್ಟಿಗಳಾದ ಶಕುಂತಳಾ ಕಿಣಿ, ರಮೇಶ್ ನಾಯಕ್, ವಾಥಿಕಾ ಪೈ, ಡಾ.ಕಸ್ತೂರಿ ಮೋಹನ ಪೈ ಉಪಸ್ಥಿತರಿದ್ದರು. ಡಾ.ಪಿ.ದಯಾನಂದ ಪೈ, ಡಾ.ಟಿ.ವಿ.ಮೋಹನದಾಸ್ ಪೈ, ಪ್ರದೀಪ್ ಜಿ.ಪೈ ಅವರ ವೀಡಿಯೋ ಸಂದೇಶ ಪ್ರದರ್ಶಿಸಲಾಯಿತು. ಸ್ಮಿತಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಸುಚಿತ್ರಾ ಎಸ್.ಶೆಣೈ ಸಾಧಕರನ್ನು ಪರಿಚಯಿಸಿದರು.