ಜಿಲ್ಲೆ

ಮನೋಜ್ ಹತ್ಯೆ ಆರೋಪಿಗಳ ಶೀಘ್ರ ಬಂಧಿಸಿ

ಶಿಕಾರಿಪುರ: ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಜ.1ರಂದು ಮನೋಜ್ ಎಂಬ ಯುವಕನನ್ನು ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದುಪರ ಸಂಘಟನೆಗಳ ಸದಸ್ಯರು ಸೋಮವಾರ ತಹಸೀಲ್ದಾರ್ ಹಾಗೂ ಡಿವೈಎಸ್ಪಿಗೆ ಮನವಿ ಸಲ್ಲಿಸಿದರು.

ವಿಎಚ್​ಪಿ ಉಪಾಧ್ಯಕ್ಷ ಎಂ.ಎಸ್.ಪ್ರಶಾಂತ್ ಮಾತನಾಡಿ, ಆಶ್ರಯ ಬಡಾವಣೆಯ ಮನೋಜ್​ನನ್ನು ಕೆಲ ಮತಾಂಧ ಯುವಕರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ಕೃತ್ಯವನ್ನು ಶಿಕಾರಿಪುರದ ಹಿಂದು ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಹತ್ಯೆ ಮಾಡಿದ ಯುವಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ನಾಗೇಶ್ ಎಂಬುವರ ಮೇಲೆ ಹಲ್ಲೆ ನಡೆದಿತ್ತು. ಅಲ್ಲದೆ ರಾಜ್ಯಾದ್ಯಂತ ಇಂತಹ ಘಟನೆಗಳು ಹೆಚ್ಚಾಗಿವೆ. ಈ ಮೂಲಕ ಹಿಂದು ಸಮಾಜದ ನೈತಿಕ ಸ್ಥೈರ್ಯ ಕುಗ್ಗಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ದೂರಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಶೀಘ್ರ ವಿಶೇಷ ತನಿಖಾ ದಳ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ವಿಎಚ್​ಪಿ ಉಪಾಧ್ಯಕ್ಷ ಭವರ್ ಸಿಂಗ್, ಪುರಸಭೆ ಮಾಜಿ ಉಪಾಧ್ಯಕ್ಷ ಎಂ.ಎಸ್.ರಮೇಶ್, ಹಿಂದು ಜನಜಾಗೃತಿ ಸಮಿತಿಯ ಪರಶುರಾಮ್ ಸುರೇಶ್ ಆಚಾರ್, ಸಂತೋಷ್ ಇತರರಿದ್ದರು.