ಮೈಸೂರು: ಕುವೆಂಪು ಜನ್ಮದಿನದ ಅಂಗವಾಗಿ ‘ಕನ್ನಡದ್ ಕನ್ನಡಿ’ ಸಂಘಟನೆಯಿಂದ ‘ವಿಶ್ವಮಾನವ ವಿಚಾರ’ ಎಂಬ ವಿನೂತನ ಕಾರ್ಯಕ್ರಮ ಸರಸ್ವತಿಪುರಂನಲ್ಲಿರುವ ಹೆರಿಟೇಜ್ ಹೌಸ್‌ನಲ್ಲಿ ಆಯೋಜಿಸಿಲಾಗಿತ್ತು.
ಶ್ರೀವಜ್ರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕುವೆಂಪು ಅವರು ರಚಿಸಿದ ಭಾವಗೀತೆಗಳ ಗಾಯನದಿಂದ ಆದಿಯಾದ ಕಾರ್ಯಕ್ರಮದಲ್ಲಿ, ತಸ್ಮಿ ಮೈಸೂರು ತಂಡದವರಿಂದ ಕುವೆಂಪು ಅವರ ಆಯ್ದ ಕಾವ್ಯದ ಸಾಲುಗಳ ಗಾಯನ ಮತ್ತು ವಾಚನ ನಡೆಯಿತು.
‘ಕುವೆಂಪು ಅವರ ಅಸಾಧಾರಣ ವ್ಯಕ್ತಿಚಿತ್ರಣ’ ವಿಷಯ ಕುರಿತ ಸಂವಾದವನ್ನು ಆಧ್ಯಾತ್ಮಿಕ ಚಿಂತಕ ದೇವನೂರು ಶಂಕರ್, ಸಾಹಿತಿ ಮತ್ತು ಸಂಘಟಕ ಟಿ.ಸತೀಶ್ ಜವರೇಗೌಡ ಮತ್ತು ಉಪನ್ಯಾಸಕ ಡಾ.ಬೆಟ್ಟಸ್ವಾಮಿ ಅವರೊಂದಿಗೆ ನಡೆಸಲಾಯಿತು. ಸಾಹಿತ್ಯಾಸಕ್ತರ ಪ್ರಶ್ನೆಗಳಿಗೆ ಮೂರು ಜನ ಸಂಪನ್ಮೂಲ ವ್ಯಕ್ತಿಗಳು ಹಲವು ಸ್ವಾರಸ್ಯಕರ ವಿಚಾರಗಳನ್ನು ತೆರೆದಿಟ್ಟರು.
ಕುವೆಂಪು ಅವರ ಬಾಲ್ಯ, ಶಿಕ್ಷಣ, ಸಾಹಿತ್ಯದ ಪ್ರೇರಣೆ ಮತ್ತು ವೈಶಿಷ್ಟೃ, ಅನಿಕೇತನ ಮತ್ತು ವಿಶ್ವಮಾನವ ಸಂದೇಶ, ವಿಚಾರ ಕ್ರಾಂತಿಗೆ ಆಹ್ವಾನ, ಮಂತ್ರ ಮಾಂಗಲ್ಯ, ಪ್ರಕೃತಿ ಮತ್ತು ಜೀವನ ದರ್ಶನ ಕುರಿತು ಅರ್ಥಪೂರ್ಣವಾಗಿ ಚರ್ಚಿಸಲಾಯಿತು.
‘ಈ ಕಾಲಘಟ್ಟಕ್ಕೆ ಕುವೆಂಪು’ ಎಂಬ ವಿಷಯ ಕುರಿತು ‘ನನ್ ಮಿನಿ ರೇಡಿಯೋ’ ಖ್ಯಾತಿಯ ಹರೀಶ್ ಮಾತನಾಡಿದರು. ಓದುವ ಪ್ರವೃತ್ತಿ ಪ್ರೋತ್ಸಾಹಿಸುವ ಸಲುವಾಗಿ, ಕುವೆಂಪು ಅವರ ಪುಸ್ತಕಗಳ ಪ್ರದರ್ಶನ ಮತ್ತು ಭಾಗವಹಿಸಿದ ಎಲ್ಲರಿಗೂ ಕುವೆಂಪುರವರ ಪುಸ್ತಕವನ್ನು ಉಚಿತವಾಗಿ ವಿತರಿಸುವುದರ ಜತೆಗೆ, ಕನ್ನಡದ್ ಕನ್ನಡಿಯ ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಧ್ಯೇಯವಾಗಿ ಅತಿಥಿಗಳಿಗೆ ಸಸಿಯನ್ನು ನೀಡಲಾಯಿತು.
ನಯನ ಅವರ ಕನ್ನಡ ಲಿಪಿಯ ವಿಭಿನ್ನ ವಿನ್ಯಾಸದ ಪ್ರದರ್ಶನವನ್ನು ಸಹ ಇರಿಸಲಾಗಿತ್ತು. ಯುಗದ ಕವಿ, ಜಗದ ಕವಿ ಕುವೆಂಪು ಅವರ ವಿಚಾರಗಳನ್ನು ಸ್ಮರಿಸುವುದರ ಮೂಲಕ ಕಾರ್ಯಕ್ರಮ ಸಮಾಪ್ತಿಗೊಂಡಿತು.