ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಪ್ರಪಂಚದ ಮೊದಲ ಇಂಜಿನಿಯರ್ ವಿಶ್ವಕರ್ಮರಾಗಿದ್ದು, ದೇವತೆಗಳ ಎಲ್ಲ ರಥಗಳನ್ನು ಮತ್ತು ಇಂದ್ರ ದೇವರ ವಜ್ರವನ್ನು ಒಳಗೊಂಡಂತೆ ಆಯುಧ ರಚಿಸಿದರು. ದೈವಿಕ ವಾಸ್ತುಶಿಲ್ಪಿಯಾಗಿ ಸೃಷ್ಟಿಗೆ ಪುಷ್ಟಿ ನೀಡಿದವರು ಎಂದು ಶಾಸಕ ಶರತ್ ಬಚ್ಚೇಗೌಡ ಬಣ್ಣಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಏನೇ ಅಭಿವೃದ್ಧಿ ಕಾಮಗಾರಿ ಮಾಡಬೇಕಾದರೆ ಮೊದಲಿಗೆ ನೀಲಿನಕ್ಷೆ ತಯಾರಿಸಲೇಬೇಕು. ಇದಕ್ಕೆ ಮೂಲ ಕರ್ತರು ವಿಶ್ವಕರ್ಮರಾಗಿದ್ದಾರೆ. ಲಂಕೆ, ಇಂದ್ರಪ್ರಸ್ಥ, ದ್ವಾರಕ ನಗರಗಳ ನಿರ್ಮಾಣಗಳೇ ಅವರ ನೈಪುಣ್ಯಕ್ಕೆ ಸಾಕ್ಷಿ ಎಂದರು.
ಇಂದಿನ ಕಾಲದಲ್ಲಿ ವಿಶ್ವಕರ್ಮ ಜನಾಂಗವನ್ನು ಹೊರತುಪಡಿಸಿ ಎಲ್ಲ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇಂಜಿನಿಯರ್‌ಗಳಾಗುತ್ತಿದ್ದಾರೆ.ಮುಂದೆ, ವಿಶ್ವಕರ್ಮ ಜನಾಂಗದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಅವರ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಹಿಂದುಳಿದ ಸಮುದಾಯವಾದರೂ ಸರ್ಕಾರದಿಂದ ಮೀಸಲಾತಿ ಪಡೆಯುವುದರಲ್ಲಿ ವಿಲವಾಗಿದ್ದು, ಸೌಲಭ್ಯ ಪಡೆಯಲು ಸಮುದಾಯದ ರಾಜ್ಯ ನಾಯಕ ಕೆ.ಪಿ.ನಂಜುಂಡಿ ಹೋರಾಟ ಮಾಡುತ್ತಿದ್ದು, ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ತಾಲೂಕಿನ ಸಮುದಾಯದವರ ಬೇಡಿಕೆಯಂತೆ ಈಗಾಗಲೇ ನಗರದ ಹೊರವಲಯದ ಉಪ್ಪಾರಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡಲಾಗಿದ್ದು, ಭವನ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧಪಡಿಸಿಕೊಳ್ಳಿ. ಅದಕ್ಕೆ ಬೇಕಾದ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ತಹಸೀಲ್ದಾರ್ ಎಂ.ವಿಜಯ್ ಕುಮಾರ್ ಮಾತನಾಡಿ, ಪಂಚ ಕಸುಬುಗಳ ಕಲೆಯುಳ್ಳ ಸೃಷ್ಟಿಯಲ್ಲಿ ಎಲ್ಲವನ್ನೂ ಸಾಧಿಸಬಲ್ಲ, ಉತ್ಪತ್ತಿ ಹಾಗೂ ಸಂರಕ್ಷಣೆಯನ್ನು ಕಲಿತ ಬ್ರಹ್ಮಾಂಡ ವಾಸ್ತು ಶಿಲ್ಪಿ ಎಲ್ಲವನ್ನು ಸೃಷ್ಟಿಸುವವನೇ ವಿಶ್ವಕರ್ಮ ಎಂದರು.
ಸಂಘದ ಪದಾಧಿಕಾರಿಗಳಾದ ಪಿ.ಶಂಕರಾಚಾರಿ, ಮುನಿಶಾಮಾಚಾರಿ, ಮಾಯಣ್ಣಾಚಾರಿ, ಶಂಕರಾಚಾರಿ, ಮುತ್ಸಂದ್ರ ಆನಂದಾಚಾರಿ, ಚಂದ್ರಣ್ಣ, ಭದ್ರಾಚಾರಿ, ಪಶುವೈದ್ಯಾಧಿಕಾರಿ ನಾರಾಯಣಸ್ವಾಮಿ, ಟಿಎಚ್‌ಒ ಡಾ.ವೀಣಾ ಹಾಗೂ ಸಮುದಾಯದ ಮುಖಂಡರು ಇದ್ದರು.