ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ ಸಮಾಜಕ್ಕೆ ವಿಶ್ವಕರ್ಮರ ಕೊಡಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್‌ನಲ್ಲಿರುವ ತಾಲೂಕು ಆಡಳಿತ ಸೌಧದ ಒಳಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ವಿಶ್ವಕರ್ಮ ಜಯಂತಿಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ವಿಶ್ವಕರ್ಮರ ಕೊಡುಗೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ, ಅಖಂಡ ಸಮಾಜಕ್ಕೆ ಅಪಾರ ನೀಡಿದ್ದಾರೆ ಎಂದು ಹೇಳಿದರು. ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದರು.
ಕೊಡುಗೆಯನ್ನು ಸ್ಮರಿಸಬೇಕಿದೆ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ರಾಜಣ್ಣ ಮಾತನಾಡಿ, ರಾಜ್ಯ ಸರ್ಕಾರ ಸಾಕಷ್ಟು ಜನಪರ ಯೋಜನೆಗಳು ಜಾರಿಗೆ ತರುವ ಮೂಲಕ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಿಶ್ವಕರ್ಮ ಸಮುದಾಯಕ್ಕೂ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮೂಲಕ ಸಾಲ-ಸೌಲಭ್ಯಗಳನ್ನು ನೀಡುತ್ತಾ, ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತಿದೆ. ವಿಶ್ವಕರ್ಮರ ಕೆತ್ತನೆ ಕಾರ್ಯಗಳ ಕಲೆಯು ಇಂದಿನ ಸಮಾಜಕ್ಕೆ ಕೊಡುಗೆ ನೀಡಿರುವುದನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೃಷ್ಣಪ್ಪ ಅವರು ವಿಶ್ವಕರ್ಮರ ಕುರಿತು ವಿಶೇಷ ಉಪನ್ಯಾಸ ನೀಡಿದರು.