ಮಂಗಳೂರು : ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಫೆ. 10 ಮತ್ತು 11ರಂದು ವಿಶ್ವ ಕೊಂಕಣಿ ಸಮಾರೋಹ ಎಂಬ ಸಾಹಿತ್ಯ ಕಲೋತ್ಸವ ನಡೆಯಲಿದೆ. ಇದೇ ಸಂದರ್ಭ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ, ಕೊಂಕಣಿ ನಾಟಕೋತ್ಸವ ಹಾಗೂ ಸರಣಿ ವಿಚಾರಗೋಷ್ಠಿಗಳು ನಡೆಯಲಿವೆ ಎಂದು ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ. 10ರಂದು ಬೆಳಗ್ಗೆ 9.30ಕ್ಕೆ ಎಂಆರ್‌ಪಿಎಲ್‌ನ ಸಿಜಿಎಂ ಯು.ಎಸ್.ಸುರೇಂದ್ರ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬಳಿಕ ನಡೆಯುವ ವಿವಿಧ ವಿಚಾರಗೋಷ್ಠಿಯಲ್ಲಿ ಜಾನ್.ಎಂ. ಪೆರ್ಮನ್ನೂರು , ಗೌರೀಶ ಪ್ರಭು , ಡಾ. ಕಸ್ತೂರಿ ಮೋಹನ ಪೈ ,
ಡಾ. ಕಿರಣ್ ಬುಡ್ಕುಳೆ ವಿಷಯ ಮಂಡಿಸಲಿದ್ದಾರೆ. ಫೆ. 11ರಂದು ಬೆಳಗ್ಗೆ 9ರಿಂದ 10.30ರವರೆಗೆ ಭಾರತೀಯ ಕೊಂಕಣ ಕಾಳಜಿ ಆನ್‌ಲೈನ್ ಗೋಷ್ಠಿಯಲ್ಲಿ ದೇಶ ವಿದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಿಶೂ ಬಾರ್ಕೂರ್ ಸಮನ್ವಯಕಾರರಾಗಿರುತ್ತಾರೆ. ಮಧ್ಯಾಹ್ನ 2.45ಕ್ಕೆ 21ನೆ ಶತಮಾನದ ಕೊಂಕಣಿ ಕವಿತೆಗಳು ವಿಚಾರಗೋಷ್ಠಿಯಲ್ಲಿ ಗೋಕುಲ್‌ದಾಸ್ ಪ್ರಭು ವಿಷಯ ಮಂಡನೆ ಮಾಡಲಿದ್ದಾರೆ.
*ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ
ಫೆ. 11ರಂದು 10.45ಕ್ಕೆ ವಿವಿಧ ಕ್ಷೇತ್ರದ ಸಾಧಕರಿಗೆ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ. ಜಯರಾಜ್ ಅಮೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರವನ್ನು ಗೋವಾದ ಕೊಂಕಣಿ ಲೇಖಕ ಡಾ. ಪ್ರಕಾಶ್ ಪರಿಯೆಂಕಾರ ಇವರ ಪೂರಮ್ ಪುಸ್ತಕಕ್ಕೆ ಹಾಗೂ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಕೇರಳದ ಕೊಂಕಣಿ ಕವಿ ಆರ್.ಎಸ್. ಭಾಸ್ಕರ್ ಅವರ ಕೊಂಕಣಿ ಕವಿತಾ ಸಂಕಲನ ಚೈತ್ರ ಕವಿತಾ ಪುಸ್ತಕಕ್ಕೆ ನೀಡಲಾಗುವುದು. ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸಮ್ಮಾನ ಪ್ರಶಸ್ತಿಯನ್ನು ಗೋವಾದ ಹಿರಿಯ ಕೊಂಕಣಿ ಕಲಾವಿದ ರಮಾನಂದ ರಾಯ್ಕರ ಇವರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು ಮೆಟಮೋರ್ಫೆಸ್ ಸೇವಾ ಸಂಸ್ಥೆಯ ವೀರ ನಾರಿ ಸೇವೆಗಾಗಿ ಶಕುಂತಲಾ ಎ. ಭಂಡಾರ್‌ಕಾರ್ ಮತ್ತು ಮಂಜೇಶ್ವರದ ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್‌ನ ಜೋಸೆಫ್ ಕ್ರಾಸ್ತಾ ಅವರಿಗೆ ನೀಡಲಾಗುವುದು. ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರವನ್ನು ಗೋವಾದ ಲೇಖಕ ರಮೇಶ ಲಾಡ್ ಅವರಿಗೆ ಹಾಗೂ
ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರವನ್ನು ಕಾಸರಗೋಡು ಚಿನ್ನಾ) ಅವರಿಗೆ ನೀಡಲಾಗುವುದು. ಪ್ರಶಸ್ತಿ ತಲಾ ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ ಎಂದು ಅವರು ವಿವರ ನೀಡಿದರು.
ಎರಡು ದಿನಗಳಲ್ಲಿ ಸಾಯಂಕಾಲ 5ರಿಂದ 8ರವರೆಗೆ ಮಂಗಳೂರಿನ ಟಿ.ವಿ. ರಮಣ ಪೈ ಸಭಾಗೃಹದಲ್ಲಿ ಕೊಂಕಣಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಕರ್ನಾಟಕ, ಮುಂಬೈ, ಗೋವಾ, ಕೇರಳ ರಾಜ್ಯಗಳಿಂದ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ.ಆರ್. ಭಟ್, ಕಸ್ತೂರಿ ಮೋಹನ್ ಪೈ, ರಮೇಶ್, ಡಾ. ಬಿ. ದೇವದಾಸ್ ಪೈ ಉಪಸ್ಥಿತರಿದ್ದರು.