ಜಿಲ್ಲೆ

ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಹಿಳಾ ಸಶಕ್ತೀಕರಣ *ವಿಶ್ವ ಬಿಲ್ಲವ ಮಹಿಳಾ ಸಂಘದ ವಾರ್ಷಿಕೋತ್ಸವದಲ್ಲಿ ಗಾಯತ್ರಿ ಸುರೇಶ್

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಹಿಳಾ ಶಕ್ತಿ ಪೂರ್ಣಪ್ರಮಾಣದಲ್ಲಿ ಬಳಕೆಯಾದಾಗ ಮಾತ್ರ ಅತ್ಯುತ್ತಮ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಉದ್ಯೋಗ ಹಾಗೂ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ತೊಡಗಿಸಿಕೊಳ್ಳಲು ವಿಪುಲ ಅವಕಾಶವಿದ್ದು, ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಹಿಳಾ ಉದ್ಯಮಿಗಳ ಒಕ್ಕೂಟ ಸಿಇಡಬ್ಲ್ಯೂಇ ಅಧ್ಯಕ್ಷೆ ಗಾಯತ್ರಿ ಸುರೇಶ್ ಹೇಳಿದರು.
ನಗರದ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಜರುಗಿದ ವಿಶ್ವ ಬಿಲ್ಲವ ಮಹಿಳಾ ಸಂಘದ ತೃತೀಯ ವಾರ್ಷಿಕೋತ್ಸವ ಸಂಭ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಶಸ್ವಿ ಉದ್ಯಮಿ ಉರ್ಮಿಳಾ ರಮೇಶ್ ಕುಮಾರ್ ಅವರ ಸಮರ್ಥ ನಾಯಕತ್ವದಲ್ಲಿ ವಿಶ್ವ ಬಿಲ್ಲವ ಮಹಿಳಾ ಸಂಘವು ಸಮಾಜದ ಶ್ರೇಯಸ್ಸಿಗಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
 ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಅವರು ಸಂಘದ ನೂತನ ವೆಬ್‌ಸೈಟ್ ಬಿಡುಗಡೆ ಮಾಡಿ ಶುಭಹಾರೈಸಿದರು. ಡಾ.ಬಿ.ಸಿ ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಖ್ಯಾತ ವೈದ್ಯರಾದ ಡಾ.ಸದಾನಂದ ಪೂಜಾರಿ ಹಾಗೂ ಸಂವೇದನಾ ಮಕ್ಕಳ ಮನೆಯ ಯೋಜನಾಧಿಕಾರಿ ಜಯಲತಾ ಎಸ್. ಅಮೀನ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಬಿಲ್ಲವ ಸಮಾಜದ ಮಹಿಳೆಯರು ಒಗ್ಗಟ್ಟಾಗಿ ಕಟ್ಟಿದ ಈ ಸಂಸ್ಥೆಯು ವಿವಿಧ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಮುನ್ನಡೆಯುತ್ತಿದೆ. ಇದಕ್ಕೆ ಸರ್ವರ ಪ್ರೋತ್ಸಾಹವೇ ಕಾರಣ. ತಾಯಿ ದಿ.ರಾಧಾ ಡಿ.ಅಮೀನ್ ಅವರ ಸ್ಮರಣಾರ್ಥವಾಗಿ ಸಂವೇದನಾ ಸಂಸ್ಥೆಗೆ ಪ್ರತೀ ತಿಂಗಳು 50 ಕೆ.ಜಿಯಂತೆ ಅಕ್ಕಿ ನೀಡುವುದಾಗಿ ಅವರು ಪ್ರಕಟಿಸಿದರು.
ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ.ಆಶಾಲತಾ ಸುವರ್ಣ, ನ್ಯಾಯವಾದಿ ಶೈಲಜಾ ರಾಜೇಶ್ ಬಂಟ್ವಾಳ, ಮತ್ತು ದಂತ ವೈದ್ಯರಾದ ಶೈಲಜಾ ಬಿ. ಕೇಶವ್ ವಾಮಂಜೂರು ಉಪಸ್ಥಿತರಿದ್ದರು.
ಅರ್ಹ ಲಾನುಭವಿಗಳಿಗೆ ವಿದ್ಯಾರ್ಥಿ ವೇತನ, ಮಹಿಳೆಯರಿಗೆ ಆರ್ಥಿಕ ಸಹಾಯ ಹಾಗೂ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸದಸ್ಯೆಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ವಿಶ್ವ ಬಿಲ್ಲವ ಮಹಿಳಾ ಸಂಘದ ಉಪಾಧ್ಯಕ್ಷೆ ವಿಜಯ ಆರುಣ್ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಸುಜಾತ ಸುವರ್ಣ ವಂದಿಸಿದರು. ಖಜಾಂಚಿ ಮಮತಾ ಪ್ರವೀಣ್ ದಂಡಕೇರಿ ಸಮ್ಮಾನಿತರ ಪತ್ರ ವಾಚಿಸಿದರು. ಸಲಹೆಗಾರ್ತಿ ಕೆ.ಎ.ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.