ಶನಿವಾರಸಂತೆ : ಶನಿವಾರಸಂತೆ ವ್ಯಾಪ್ತಿಯಲ್ಲಿರುವ ಹಿಂದು ಮಲೆಯಾಳಿಗಳು ಸೋಮವಾರ ಸಡಗರ ಸಂಭ್ರಮದಿಂದ ವಿಷು ಹಬ್ಬ ಆಚರಿಸಿದರು.
ಶನಿವಾರಸಂತೆ ಪಟ್ಟಣ ಸೇರಿದಂತೆ ಮಾಲಂಬಿ, ಕಣಿವೆಬಸವನಹಳ್ಳಿ, ಮುಳ್ಳೂರು, ಜಾಗೇನಹಳ್ಳಿ, ಗೋಪಾಲಪುರ, ಒಡೆಯನಪುರ, ಹೊಸಗುತ್ತಿ, ಆಲೂರುಸಿದ್ದಾಪುರ ಮುಂತಾದ ಕಡೆಗಳಲ್ಲಿ ಮಲೆಯಾಳಿ ಸಮುದಾಯದಿಂದ ವಿಷು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸೋಮವಾರ ಬೆಳಗ್ಗೆ ಮಲೆಯಾಳಿಗಳು ತಮ್ಮ ಮನೆಗಳಲ್ಲಿ ಸಾಂಪ್ರದಾಯಕ ವಿಷುಕಣಿ ಸಂಕೇತವಾಗಿ ಲೋಹದ ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನ ಕಾಯಿ, ಹಲಸಿನ ಕಾಯಿ, ಮಾವಿನಕಾಯಿ, ಕೆಲ ತರಕಾರಿ ಸೇರಿದಂತೆ ಹೊನ್ನೆ ಮರದ ಹೂವು, ಚಿನ್ನ, ಬೆಳ್ಳಿ, ಹಣ, ಹೊಸ ಬಟ್ಟೆ, ಪಂಚಾಗ ಇನ್ನಿತರ ವಸ್ತುಗಳನ್ನಿಟ್ಟು ನಂತರ ಆ ತಟ್ಟೆಯನ್ನು ಮನೆಯ ದೇವರ ಕೋಣೆಯಲ್ಲಿಟ್ಟು ಮನೆ ದೇವರಾದ ಶ್ರೀಕೃಷ್ಣನ ವಿಗ್ರಹ, ಭಾವಚಿತ್ರಕ್ಕೆ ದೀಪ ಬೆಳಗಿಸಿ ಮನೆ ಮಂದಿ ಸೇರಿಕೊಂಡು ಭಯಭಕ್ತಿಯಿಂದ ಪೂಜಿಸಿದರು. ನಂತರ ಕನ್ನಡಿಯ ಪ್ರತಿಬಿಂಬ ಮೂಲಕ ಶ್ರೀಕೃಷ್ಣನ ವಿಗ್ರಹವನ್ನು ಮನೆ ಮಂದಿ ನೋಡಿಕೊಂಡು ವಿಷು ಹೊಸ ವರ್ಷ ಹಬ್ಬ ಆಚರಿಸಿದರು. ಬಗೆಬಗೆಯ ಸಿಹಿ ಊಟ ತಯಾರಿಸಿ ಭೋಜನ ಸವಿದರು.