ಪಾಂಡವಪುರ: ಕನ್ನಡ ಸಿನಿಮಾ ರಂಗಕ್ಕೆ ಅಪಾರ ಸೇವೆ ಸಲ್ಲಿಸಿರುವ ಡಾ.ವಿಷ್ಣುವರ್ಧನ್ ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವಿಷ್ಣುಸೇನಾ ಸಮಿತಿ ಜಿಲ್ಲಾಧ್ಯಕ್ಷ ವಿಷ್ಣು ವಿಠಲ ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಇಂದಿಗೆ 13 ವರ್ಷಗಳು ಸಂದಿದೆ. ಆದರೆ, ಅವರ ನಟನೆ, ಕನ್ನಡಾಭಿಮಾನ, ಕಲಾಸೇವೆ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿದೆ. ನಾಲ್ಕು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮಹಾನ್ ನಟನನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದರು.
ನೆರೆದಿದ್ದ ಅಭಿಮಾನಿಗಳಿಗೆ ಉಪಾಹಾರ ವಿತರಿಸಲಾಯಿತು. ಓಮಿನಿ ಶಿವಕುಮಾರ್, ರಾಮಣ್ಣ, ಸೂಸೈರಾಜು (ಮಾಮು), ಅಕ್ಷಯ್, ಚೆಲುವರಾಜು, ಸೂರಿ, ಬನಘಟ್ಟ ಮಹದೇವು, ವರುಣ್, ರಘು ಇತರರು ಇದ್ದರು.