ಗುಂಡ್ಲುಪೇಟೆ ಪಟ್ಟಣದ ವಿಜಯನಾರಾಯಣಸ್ವಾಮಿ ದೇವಾಲಯದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಲೇಖನ ಯಜ್ಞದ ಅಭಿಯಾನದ ಅಂಗವಾಗಿ ವಿಪ್ರ ಮಹಿಳಾ ಬಳಗದವರಿಗೆ ಜಿ.ಎಂ.ಹೆಗಡೆ ಪುಸ್ತಕ ವಿತರಣೆ ಮಾಡಿದರು. ಗೋಪಾಲಕೃಷ್ಣಭಟ್, ದೊರೆಸ್ವಾಮಿ, ಮಾಲಾ, ಗಾಯಿತ್ರಿ, ಶ್ರೀ ನಿವಾಸಮೂರ್ತು, ಶಂಕರನಾರಾಯಣ ಜೋಯಿಸ್ ಇದ್ದರು.  
ಜಿಲ್ಲೆ

ವಿಷ್ಣು ಸಹಸ್ರನಾಮ ಲೇಖನ ಯಜ್ಞ ಅಭಿಯಾನ

ಲೋಕೇಶ್ ಮನು. ಡಿ

ಗುಂಡ್ಲುಪೇಟೆ: ಶಿವಮೊಗ್ಗ ಜಿಲ್ಲೆಯ ಮಹಾನಂದಿ ಕ್ಷೇತ್ರದ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ಹಾಗೂ ಗೋಕರ್ಣದ ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಹಮ್ಮಿಕೊಂಡಿರುವ ಶ್ರೀ ವಿಷ್ಣು ಸಹಸ್ರನಾಮ ಲೇಖನ ಯಜ್ಞದ ಅಭಿಯಾನಕ್ಕೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಹೆಗಡೆ ಚಾಲನೆ ನೀಡಿದರು.


ಪಟ್ಟಣದ ವಿಜಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಪ್ರ ಮಹಿಳಾ ಬಳಗದ ಸದಸ್ಯರಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ವಿಷ್ಣು ಸಹಸ್ರನಾಮ ಕ್ಷೇತ್ರ ಸಾಕಾರಕ್ಕಾಗಿ ಪ್ರಸ್ತುತ ವಿಶೇಷವಾಗಿ ಲೇಖನ ಯಜ್ಞವನ್ನು ಆಯೋಜಿಸಲಾಗಿದೆ, 108 ಶ್ಲೋಕಗಳನ್ನು 108 ಬಾರಿ ಬರೆಯುವ ಈ ಮಹಾಯಜ್ಞದ ಪುಸ್ತಕವನ್ನು ಗೋಕರ್ಣದ ಅಶೋಕೆಯಲ್ಲಿ ಲೋಕಾರ್ಪಣೆ ಮಾಡಲಾಗಿದೆ. ವಿಷ್ಣು ಸಹಸ್ರನಾಮ ಓದುವುದರ ಜತೆಗೆ ಬರೆಯುವುದು ಕೂಡ ಮಾಡಿದಾಗ ಮನಸ್ಸಿನ ಮೇಲೆ ಮತ್ತಷ್ಟು ಉತ್ತಮ ಪರಿಣಾಮ ಬೀರುವುದು ಎಂದು ಮನೋ ವೈಜ್ಞಾನಿಕವಾಗಿ ನಿರೂಪಿತವಾಗಿದೆ. ಏಕಾಗ್ರತೆಯಿಂದ ನಾಮ ಸಹಸ್ರಗಳ ಸದಾಶಯಗಳನ್ನು ಅರಿತುಕೊಂಡರೆ, ಅದು ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿ, ಮನೋಬುದ್ಧಿಯಲ್ಲಿ ನೆಲೆ ನಿಂತು, ನಿತ್ಯವೂ ಸನ್ಮಂಗಳವನ್ನು ಉಂಟು ಮಾಡುತ್ತದೆ ಎಂದು ಹೇಳಿದರು.

ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ವಿ.ಗೋಪಾಲಕೃಷ್ಣ ಭಟ್, ಶ್ರೀ ಮಠದ ಕೃಷ್ಣಮೂರ್ತಿ, ವಿಶ್ವನಾಥ ಭಟ್, ಉದ್ಯಮಿ ದೊರೆಸ್ವಾಮಿ, ವಿಪ್ರ ಮಹಿಳಾ ಬಳದ ಮಾಲಾ ನಾಗರಾಜು, ಶಾರದ ತಸ್ಸಂಗ ಸಮಾಜದ ಗಾಯತ್ರಿ ಅನಂತು, ವಿಶ್ವ ಹಿಂದು ಪರಿಷತ್ತಿನ ಪಿ.ಎಸ್. ಶ್ರೀನಿವಾಸ ಮೂರ್ತಿ, ಬಾಲಸುಬ್ರಹ್ಮಣ್ಯಂ, ಶೇಶಾದ್ರಿ, ನಾಗರಾಜಶರ್ಮಾ, ಶಂಕರ ನಾರಾಯಣ ಜೋಯಿಸ್ ಹಲವರು ಇದ್ದರು.