ಹೊಸದುರ್ಗ: ಬಡವರ ಮಕ್ಕಳಿಗೆ ಶಿಕ್ಷಣದ ಅವಕಾಶಗಳನ್ನು ಒದಗಿಸುವ ಜತೆಗೆ ಹಸಿವನ್ನು ನೀಗಿಸಲು ಶ್ರಮಿಸಿದ ಜಯದೇವ ಜಗದ್ಗುರುಗಳು ಕನ್ನಡ ನಾಡಿನ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾರೆ ಎಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.
ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದಲ್ಲಿ ಸೋಮವಾರ ರಾತ್ರಿ ಚಿತ್ರದುರ್ಗದ ಮುರುಘಾಮಠ ಆಯೋಜಿಸಿದ್ದ ಅನುಭಾವ ಶ್ರಾವಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗದ ಮುರುಘಾ ಮಠದ ಪರಂಪರೆಯಲ್ಲಿ ಜಯದೇವ ಜಗದ್ಗುರುಗಳು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ ಎಂದರು.
ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಮೂಲಕ ನಾಡಿನ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದರು.
ಜಯದೇವ ಜಗದ್ಗುರುಗಳ ಕಾರುಣ್ಯದಿಂದ ಬಿ.ಡಿ.ಜತ್ತಿ ಹಾಗೂ ಎಸ್.ನಿಜಲಿಂಗಪ್ಪ ಅವರಂತಹ ಮುತ್ಸದ್ದಿ ನಾಯಕರ ಸೇವೆಯ ಅವಕಾಶ ನಾಡಿಗೆ ದೊರೆಯಿತು ಎಂದರು.
ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ರಾಜ್ಯವು ಸೇರಿ ದೇಶದ ಜನರಿಗೆ ಬಸವಾದಿ ಶರಣರ ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತಿದ ಕೀರ್ತಿಯನ್ನು ಮುರುಘಾಮಠ ಹೊಂದಿದೆ.
ಮುರುಘಾ ಮಠದ ಪರಂಪರೆಯ ಜಯದೇವ ಜಗದ್ಗುರುಗಳು ಬಡವರ ಮನೆಯ ಮಕ್ಕಳಿಗೆ ಅನ್ನ ಅರಿವು ಆಶ್ರಯ ನೀಡುವ ಮೂಲಕ ಮನೆಮನೆಗಳಲ್ಲಿ ಆಧ್ಯಾತ್ಮಿಕ ಹಾಗೂ ಶಿಕ್ಷಣದ ಜ್ಯೋತಿಯನ್ನು ಹಚ್ಚುವ ಕೆಲಸ ಮಾಡಿದ್ದಾರೆ ಎಂದರು.
ಪೀಠಾಧಿಪತಿಗಳಾಗಿ ನಾಡಿನಲ್ಲಿ ಸಂಚಾರ ಮಾಡುತ್ತ, ಭಕ್ತರಿಂದ ಸಂಗ್ರಹವಾದ ದೇಣಿಗೆ ಹಣದಲ್ಲಿ ಅಲ್ಲಿಯೇ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುವ ಮೂಲಕ ಬಹುದೊಡ್ಡ ಶಿಕ್ಷಣದ ಕ್ರಾಂತಿಯನ್ನು ಮಾಡಿದರು.
ಒಳಪಂಗಡಗಳ ಸಂಘರ್ಷವನ್ನು ನಿವಾರಿಸುವ ಮೂಲಕ ಎಲ್ಲರ ಪ್ರೀತಿಯನ್ನ ಸಂಪಾದಿಸಿದ ಜಗದ್ಗುರುಗಳು ಮಹಿಳೆಯರಿಗೆ ಶಿಕ್ಷಣ, ದಾಸೋಹ ವ್ಯವಸ್ಥೆಯನ್ನು ಬೆಳೆಸಿದರು ಎಂದರು.
ಕಾರ್ಯಕ್ರಮದಲ್ಲಿ ತಿಪ್ಪೇರುದ್ರ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಮಾಜಿ ಅಧ್ಯಕ್ಷ ಶಿವಕುಮಾರ್, ರಂಗಸ್ವಾಮಿ, ತಿಪ್ಪೇಸ್ವಾಮಿ, ರವಿ, ಕರಿಬಸಪ್ಪ ಶಿವಣ್ಣ ಮತ್ತಿತರರಿದ್ದರು.
ಅನುಭವ ಶ್ರಾವಣ ಕಾರ್ಯಕ್ರಮದ ನಿಮಿತ್ತ ತಿಪ್ಪೇರುದ್ರಸ್ವಾಮಿ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ತಪಾಸಣೆ ನಡೆಸುವ ಜತೆಗೆ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು.