ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ
ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪುದುಕೋಟೆ ಗ್ರಾಮದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಬೀದಿ- ದೀಪ, ಕುಡಿಯುವ ನೀರಿನ ಅಭಾವವೂ ಇದೆ. ಹರಿಜನ ಕಾಲೂನಿಯಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ನೀರಿನ ಪೈಪ್‌ಲೈನ್ ಅಳವಡಿಸಿದರು ನೀರು ಬರುತ್ತಿಲ್ಲ.
ಸರ್ಕಾರದಿಂದ ಬರುವ ಯೋಜನೆಗಳೆಲ್ಲ ಅರ್ಹ ಫಲಾನುಭವಿಗಳ ಕೈ ಸೇರುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳಿದ್ದು, ಕಳಪೆ ಕಾಮಗಾರಿ ನಡೆದಿದೆ. ಕೇಂದ್ರ ಸ್ಥಾನ ವಿರಾಜಪೇಟೆಯಿಂದ ಕೂಗಳತೆ ದೂರದಲ್ಲಿದ್ದರೂ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ವಿಜಯವಾಣಿ ಗ್ರಾಮ ಸಂಚಾರ ನಡೆಸಿದ ಸಂದರ್ಭ ತಮ್ಮೂರಿನ ಸಮಸ್ಯೆಗಳನ್ನು ಗ್ರಾಮಸ್ಥರು ತೆರೆದಿಟ್ಟರು.
ಕೋಟೆಪೊಪ್ಪದಿಂದ ಬೆಳ್ಳರಿಮಾಡುವಿಗೆ ತೆರಳುವ ಗ್ರಾಮ ಸಂರ್ಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ವಾಹನ ಸವಾರರು ಹರಸಹಾಸ ಪಡುವಂತಾಗಿದೆ. ವಿರಾಜಪೇಟೆ ಮುಖ್ಯರಸ್ತೆ ಬಂದ್ ಆದರೆ ಇದೇ ರಸ್ತೆ ಬೈಪಾಸ್ ರಸ್ತೆಯಾಗಿದೆ. ಕೆಲವು ರಸ್ತೆಗಳು ನಿರ್ವಹಣೆ ಆಗಬೇಕಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಾಸಕರ ಅನುದಾನದಲ್ಲಿ ೬೦ ಲಕ್ಷ ರೂಪಾಯಿ ಮೊತ್ತಕ್ಕೂ ಅಧಿಕ ಮೊತ್ತದ ಕಾಮಗಾರಿಗಳು ನಡೆದಿದೆ ಎಂದು ಗ್ರಾಮಸ್ಥ ನೀತಿಕುಮಾರ್ ವಿವರಿಸಿದರು.
೪೦ ಕುಟುಂಬ ಇರುವ ಕೋಟೆಪೊಪ್ಪದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಜನಜೀವನ್ ಮಿಷನ್ ಅಡಿಯಲ್ಲಿ ನೀರಿನ ಸಂಪರ್ಕ ಕಲ್ಪಸಬೇಕಿದೆ. ಗ್ರಾಮ ಪಂಚಾಯಿತಿ ವತಿಯಿಂದ ೪ ಆಶ್ರಯ ಮನೆ ನಿರ್ಮಿಸಲಾಗಿದೆ. ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಗಳು ಕಡಿದಾಗಿ ದ್ದರು ನಿರ್ವಹಣೆ ಇದೆ. ಕ್ಷೇತ್ರದ ಶಾಸಕರು, ಜಿ.ಪಂ ಸದಸ್ಯರು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದ ಗ್ರಾಮಸ್ಥ ವಿ.ಎಸ್. ಸುರೇಶ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪುದುಕೋಟೆ(ಕೋಟೆಕೊಪ್ಪ)
ಗ್ರಾಮದ ಎತ್ತರದ ಸ್ಥಳ ವಡ್ಡರಮೊಟ್ಟೆಯ ಎತ್ತರವಾದ ಸ್ಥಳದಲ್ಲಿ ಅಂದಿನ ರಾಜ ಕೋಟೆಯನ್ನು ನಿರ್ಮಿಸಿ ಕೋಟೆಕೊಪ್ಪ ಎಂದು ನಾಮಕರಣ ಮಾಡಿದರು. (ಕೊಪ್ಪ ಎಂದರೆ ಎತ್ತರವಾದ ಸ್ಥಳ) ಕೋಟೆ ಹೊಸದಾಗಿರುವುದರಿಂದ ಪುದುಕೋಟೆ (ಪುದು ಎಂದರೆ ಹೊಸದು) ಎಂದು ಕರೆಯಲಾಗುತ್ತಿದೆ.
ಪುದುಕೋಟೆ ಗ್ರಾಮ ವಿರಾಜಪೇಟೆ ಚಂಬೆಬೆಳ್ಳುರು ರಾಜ್ಯ ಹೆದ್ದಾರಿ ಕುಕ್ಕೂರುವಿನಿಂದ ಪ್ರಾರಂಭಗೊಂಡು ಚಂಬೆಬೆಳ್ಳುರು ಭಗವತಿ ದೇವಸ್ಥಾನ, ದೇವಣಗೇರಿ ಬೆಳ್ಳರಿಮಾಡು ಗಡಿಭಾಗದವರಗೆ ಇದೆ. ಅಂದಾಜು ೬ ಕೀ.ಮೀಟರ್ ವಿಸ್ತೀರ್ಣ ಹೊಂದಿದೆ. ೧೫೦ ಕುಟುಂಬಗಳಿದ್ದು, ೬೦೦ ಜನಸಂಖ್ಯೆ ಹೊಂದಿದೆ. ಒಕ್ಕಲಿಗರ ಡಾಲು ಪುದುಕೋಟೆ ಕ್ಷೇತ್ರದ ಗ್ರಾಮ ಪಂಚಾಯಿತಿ ಹಾಲಿ ಸದಸ್ಯರಾಗಿ ದ್ದಾರೆ.
ಭದ್ರಕಾಳಿ ದೇವಸ್ಥಾನ, ಅಜ್ಜಕೊಟ್ಟ ಚಾಮುಂಡಿ ದೇವಾಲಯ, ವೆಂಕಟೆಶ್ವರ ದೇವಸ್ಥಾನ, ಬೈತೂರು ಕಟ್ಟೆ, ಕೈಮಡ, ಕೊಳುವಂಡ ಹಾಗು ಚೆಂಬಂಡ ಕುಟುಂಬದ ಮುಂದು ಮನೆ, ಮಂಡೆಪಂಡ ಕುಟುಂಬದ ಐನ್‌ಮನೆ, ಕೈಮಡಗಳಿದೆ. ಗ್ರಾಮ ದೇವರುಗಳ ವಾರ್ಪಿಕ ಹಬ್ಬವು ಏಪ್ರಿಲ್, ಮೇ ತಿಂಗಳಲ್ಲಿ ನಡೆಯುತ್ತದೆ.
ಕುಟುಂಬಗಳು
ಗ್ರಾಮದಲ್ಲಿ ಎಲ್ಲಾ ಜನಾಂಗದವರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಕೊಳುವಂಡ, ಮೂಕೊಂಡ, ಚೆಂಬಂಡ, ಮಂಡೇಪಂಡ, ಪೊರ್ಕೊಂಡ(ಕೊಡವ), ಒಕ್ಕಲಿಗ, ಬಡಗಿ, ಬಿಲ್ಲವ, ಬಂಟ್ಸ್, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನಾಂಗವಿದೆ.
ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಹೊರತು ಪಡಿಸಿದರೆ ಯಾವುದೇ ಸರ್ಕಾರಿ, ಅರೆ ಸರ್ಕಾರಿ ಕಟ್ಟಡಗಳಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬರುವ ಅನುದಾನ ಕೆಲವು ರಾಜಕಾರಣಿಗಳ ಒತ್ತಡದಿಂದ ಬೇರೆ ಕಡೆಗೆ ವರ್ಗಾಹಿಸುತ್ತಾರೆ. ಪಟ್ಟಣಕ್ಕೆ ಕೂಗಳತೆ ದೂರ ಊರು ಇದ್ದರು ನತದೃಷ್ಟ ಗ್ರಾಮವಾಗಿದೆ.
ಸಾಧಕರು
ಒಕ್ಕಲಿಗರ ಪ್ರೇಮ್ ಕುಮಾರ್(ಸರ್ಕಾರಿ ಅಭಿಯಂತರ), ಮೂಕೊಂಡ ಸಚಿನ್ ಮುತ್ತಣ್ಣ (ಆರ‌್ಕಿಟೇಕ್ಟ್), ಚಾರಿಮಂಡ ಜಿತೇಶ್(ಚಿತ್ರನಟ), ಒಕ್ಕಲಿಗರ ತೇಜು(ವೈದ್ಯೆ).
**
ಅಭಿವೃದ್ಧಿ ಕಾರ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬರುತ್ತಿಲ್ಲ. ಬರುವ ಅಲ್ಪ ಅನುದಾನದಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಅನುದಾನ ಇಲ್ಲದೆ ಅಭಿವೃದ್ಧಿ ಮಾಡಿ ಎಂದರೆ ಎಲ್ಲಿಂದ ಮಾಡುವುದು. ಗ್ರಾಮ ಪಂಚಾಯಿತಿಗೆ ವಾರ್ಷಿಕ ೨೫ ಲಕ್ಷ ರೂ. ಅನುದಾನ ಬರುತ್ತದೆ. ಅದರಲ್ಲಿ ಎಸ್ಸಿ, ಎಸ್ಟಿ ಅನುದಾನ ಹೊರತು ಪಡಿಸಿ, ಉಳಿದ ಅನುದಾನವನ್ನು ೧೨ ಸದಸ್ಯರು ತಮ್ಮ ವಾರ್ಡ್‌ಗಳಿಗೆ ವಿನಿಯೋಗಿಸಬೇಕಿದೆ. ಒಕ್ಕಲಿಗರ ಡಾಲು, ಗ್ರಾಮ ಪಂಚಾಯಿತಿ ಸದಸ್ಯರು.
**
ಪುದುಕೋಟೆ ಅಂಗನವಾಡಿ ಕಾಂಕ್ರಿಟ್ ರಸ್ತೆ, ಕೊಳುವಂಡ ಕಾಲೂನಿ ಕಾಂಕ್ರಿಟ್ ರಸ್ತೆ, ತಡೆಗೋಡೆ, ಪಿಡ್ಲೂಡಿ ರಸ್ತೆಗಳಿಗೆ ಕಿರು ಸೇತುವೆ, ಶಾಸಕರ ಅನುದಾನದ ಕಾಮಗಾರಿ ಸೇರಿದಂತೆ ೬೦ ಲಕ್ಷ ರೂಪಾಯಿಗೂ ಅಧಿಕ ಮೊತ್ತದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಬಂದಿರುವ ಅನುದಾನವನ್ನು ಸಮರ್ಪಕವಾಗಿ ಬಳಸಲಾಗಿದೆ. ಮೂಕೊಂಡ ಶಶಿ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು.
**
ಪಂಚಾಯಿತಿಯಲ್ಲಿ ಒಂದು ರಾಜಕೀಯ ಪಕ್ಷಕ್ಕೆ ಪೂರ್ಣ ಬಹುಮತ ಇದ್ದರೂ ಕೂಡ ಅಧಿಕಾರ ಇಲ್ಲ. ಪಂಚಾಯಿತಿ ಮುಖ್ಯಸ್ಥರೆ ಆಡಳಿತ ನಡೆಸಲು ನಿಷ್ಕ್ರೀಯರಾದರೆ ಗ್ರಾಮಾಭಿವೃದ್ಧಿ ಸಾಧ್ಯವಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ, ಜನಪ್ರತಿನಿಧಿಗಳ ಸ್ವಾರ್ಥದಿಂದ ಮಂಜೂರಾದ ಅನುದಾನ ಬೇರೆಡೆಗೆ ಹೋಗುತ್ತಿದೆ. ಒಂದೆರಡು ಕಡೆ ರಸ್ತೆ ನಿರ್ಮಿಸಿದರೆ ಗ್ರಾಮ ಪ್ರಗತಿ ಸಾಧಿಸಿದೆ ಎನ್ನಲು ಸಾಧ್ಯವಿಲ್ಲ. ಕೊಳುವಂಡ ರಾಜಾರಾಮ್, ಗ್ರಾಮಸ್ಥರು.