ಜಿಲ್ಲೆ

ಪುರಸಭೆ ಸಿಬ್ಬಂದಿ ಕಾರ್ಯಾಚರಣೆ

ಚರಂಡಿಯಲ್ಲಿ ತುಂಬಿದ್ದ ತ್ಯಾಜ್ಯ ತೆರವು

  • ವಿಜಯವಾಣಿ ಸುದ್ದಿಜಾಲ ವಿರಾಜಪೇಟೆ
    ಹಲವು ವರ್ಷದಿಂದ ತ್ಯಾಜ್ಯದಿಂದ ತುಂಬಿದ್ದ ಚರಂಡಿಯನ್ನು ಪುರಸಭೆ ಸಿಬ್ಬಂದಿ ಭಾನುವಾರ ಸ್ವಚ್ಛಗೊಳಿಸಿದರು. ವಿರಾಜಪೇಟೆ ಗೋಣಿಕೊಪ್ಪ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮಟನ್ ಮಾರುಕಟ್ಟೆಯ ಜಂಕ್ಷನ್ ರಸ್ತೆಯು ಪ್ರತಿ ಬಾರಿ ಮಳೆ ಬಂದಾಗ ನೀರಿನಿಂದ ಆವೃತ್ತವಾಗುತ್ತಿತ್ತು. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು.
    ಶನಿವಾರ ಮಧ್ಯಾಹ್ನ ಸುರಿದ ಮಳೆಗೂ ಮಾರುಕಟ್ಟೆ ರಸ್ತೆ ಸಂಪೂರ್ಣವಾಗಿ ನೀರಿನಿಂದ ತುಂಬಿತ್ತು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ವಿರಾಜಪೇಟೆ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಹಾಗೂ ಮುಖ್ಯಾಧಿಕಾರಿ ಎ. ಚಂದ್ರಕುಮಾರ, ಕಾರ್ಯಾಚರಣೆಗೆ ಆದೇಶ ನೀಡಿ, ಸ್ವಚ್ಛತಾ ಕಾರ್ಯ ನಡೆಸಿದರು. ಚರಂಡಿಯಲ್ಲಿ ತುಂಬಿದ್ದ ಕಲ್ಲು, ಸಿಮೆಂಟ್ ಮತ್ತು ಗಾಜಿನ ತ್ಯಾಜ್ಯ ತೆರವು ಮಾಡಿದ ನಂತರ ನೀರು ಸರಾಗವಾಗಿ ಹರಿದು ಹೋಯಿತು. ಪುರಸಭಾ ಸದಸ್ಯರಾದ ರಾಜೇಶ್ ಪದ್ಮನಾಭ, ಮತೀನ್, ಆರೋಗ್ಯ ನಿರೀಕ್ಷಕಿ ಕೋಮಲಾ, ಸಿಬ್ಬಂದಿ ಮುರಳಿ ಮತ್ತು ಪೌರ ಕಾರ್ಮಿಕರು ಹಾಜರಿದ್ದರು.