ಜಿಲ್ಲೆ

ವಿರಾಜಪೇಟೆ ಬಿಜೆಪಿ ಟಿಕೆಟ್‌ಗೆ ಹಲವರ ಆಸೆ

reportermys

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ


ಕ್ಷೇತ್ರ ಪುನರ್ ವಿಂಗಡಣೆಯಾದ ಮೇಲೆ ಅಸ್ತಿತ್ವಕ್ಕೆ ಬಂದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸತತ ೩ ಬಾರಿ ಗೆಲ್ಲುವ ಮೂಲಕ ಬಿಜೆಪಿ ಹಿರಿಯ ಮುಖಂಡ ಕೆ.ಜಿ. ಬೋಪಯ್ಯ ಹ್ಯಾಟ್ರಿಕ್ ಸಾಧನೆಗೈದಿದ್ದಾರೆ. ಮೂರು ಅವಧಿಯಲ್ಲಿಯೂ ಹಲವು ಬಿಜೆಪಿ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ೨೦೨೩ ರ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಹಲವು ಮುಖಂಡರು ಕನಸ್ಸು ಕಾಣುತ್ತಿರು
ವುದು ವಿಶೇಷ.

ಮಡಿಕೇರಿ ಕ್ಷೇತ್ರ ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಹೊಸದಾಗಿ ಅಸ್ತಿತ್ವಕ್ಕೆ ಬಂದ ವಿರಾಜಪೇಟೆ ಕ್ಷೇತ್ರದಿಂದ ೨೦೦೮ ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ಸಿನಿಂದ ಶಾಂತೆಯಂಡ ವೀಣಾ ಅಚ್ಚಯ್ಯ, ಜೆಡಿಎಸ್(ಎಸ್)ನಿಂದ ಚೆಪ್ಪುಡಿರ ಅರುಣ್ ಮಾಚಯ್ಯ ಸ್ಪರ್ಧಿಸಿದ್ದರು. ಅದಕ್ಕೂ ಮುನ್ನ ಅಸ್ತಿತ್ವದಲ್ಲಿದ್ದ ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಎಚ್.ಡಿ. ಬಸವರಾಜು ಶಾಸಕರಾಗಿದ್ದರು.

ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ಸಂಪೂರ್ಣ ಹಾಗೂ ಮಡಿಕೇರಿ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳು ಹಾಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ವಿರಾಜಪೇಟೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕೊಡವರಿಗೆ ಸ್ಪರ್ಧಿಸಲು ಅವಕಾಶ ಇರಲಿಲ್ಲ. ಸಾಮಾನ್ಯ ಕ್ಷೇತ್ರವಾದ ಬಳಿಕವೂ ನಮ್ಮ ಪ್ರತಿನಿಧಿ ಇಲ್ಲ ಎಂಬ ಕೊರಗು ಕೊಡವರನ್ನು ಕಾಡುತ್ತಿದೆ.

ಕೊಡವರಿಗೆ ಅವಕಾಶ ಇಲ್ಲ ಎಂಬ ಕೊರಗಿನ ನಡುವೆಯೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೊಡವ ಜನಾಂಗದ ಶಾಂತೆಯಂಡ ವೀಣಾ ಅಚ್ಚಯ್ಯ, ಚೆಪ್ಪುಡೀರ ಅರುಣ್ ಮಾಚಯ್ಯ, ಬಿದ್ದಾಟಂಡ ಟಿ. ಪ್ರದೀಪ್, ಮೇರಿಯಂಡ ಸಂಕೇತ್ ಪೂವಯ್ಯ ಅವರಿಗೆ ಕೊಡವರು ನಿರೀಕ್ಷಿತ ಬೆಂಬಲ ನೀಡಲಿಲ್ಲ. ವೀಣಾ- ಅರುಣ್ ನಡುವೆ ಮತ ವಿಭಜನೆ ಕೂಡ ಸೋಲಿಗೆ ಕಾರಣವಾಯಿತು.

ಬಹುತೇಕ ಕೊಡವ ಮತದಾರರು ಬಿಜೆಪಿಯಲ್ಲಿರುವುದರಿಂದ ಬಿಜೆಪಿ ಹೊರತು ಪಡಿಸಿದ್ದಂತೆ ಇತರೆ ಪಕ್ಷದಿಂದ ಸ್ಪರ್ಧಿಸುವ ಕೊಡವ ಅಭ್ಯರ್ಥಿಗೆ ಬೆಂಬಲ ನೀಡುತ್ತಿಲ್ಲ. ಬಿಜೆಪಿಯಲ್ಲಿ ಕೊಡವ ಅಭ್ಯರ್ಥಿ ನಿಲ್ಲಿಸಬೇಕೆಂಬ ಅಭಿಪ್ರಾಯವನ್ನು ಟಿಕೆಟ್ ಆಕಾಂಕ್ಷಿಗಳಾಗಿರುವ ಬಿಜೆಪಿ ಮುಖಂಡರ ಬೆಂಬಲಿಗರು ವ್ಯಕ್ತ ಪಡಿಸುತ್ತಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆ.ಜಿ. ಬೋಪಯ್ಯ ಬಿಜೆಪಿ ಹಲವು ಮುಖಂಡರೊಂದಿಗೆ ಆತ್ಮೀಯತೆ ಹೊಂದಿದ್ದಾರೆ. ಕೇಂದ್ರ ಮಟ್ಟದಲ್ಲಿ ಪ್ರಭಾವ ಬೀರುವ ನೇತಾರರ ಸಂಪರ್ಕದ ಹಿನ್ನೆಲೆಯಲ್ಲಿ ಅಂತಿಮ ಕ್ಷಣದಲ್ಲಿ ಮತ್ತೊಮ್ಮೆ ಟಿಕೆಟ್ ಪಡೆಯುತ್ತಾರೆಂಬ ಅಚಲ ವಿಶ್ವಾಸವನ್ನು ಅವರ ಬೆಂಬಲಿಗರು ಹೊಂದಿದ್ದಾರೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಜಾತಿ ನೆಲೆಗಟ್ಟಿನಲ್ಲಿ ಕೆ.ಜಿ. ಬೋಪಯ್ಯಗೆ ವಿರೋಧ ವ್ಯಕ್ತವಾಗುತ್ತಿದೆ ಎಂಬ ಅಭಿಪ್ರಾಯ ಮೂಡುವಂತೆ ಮಾಡುತ್ತಾರೆ. ಆದರೆ, ಕ್ಷೇತ್ರ ವ್ಯಾಪ್ತಿಯಲ್ಲಿ ನಿಕಟ ಸಂಪರ್ಕ ಹೊಂದಿರುವ ಅವರು ಚುನಾವಣೆಯಿಂದ ಚುನಾವಣೆಗೆ ಗೆಲುವಿನ ಅಂತರ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಹಿಂದುತ್ವ, ಬಿಜೆಪಿ, ನರೇಂದ್ರ ಮೋದಿ ಕಾರಣಕ್ಕಾಗಿ ವಿರೋಧದ ನಡುವೆಯೂ ಗೆಲ್ಲುವಿನ ನಾಗಲೋಟ ಮುಂದುವರಿಸಿದ್ದಾರೆ.

ವಯಸ್ಸಿನ ಲೆಕ್ಕಚಾರದಲ್ಲಿ ಟಿಕೆಟ್ ತಪ್ಪುತ್ತದೆ. ನಮಗೆ ಈ ಬಾರಿ ಅವಕಾಶ ಖಚಿತ ಎಂದು ಹಲವು ನೇತಾರರು ಕನಸ್ಸು ಕಾಣಲಾರಂಭಿಸಿದ್ದಾರೆ. ಆಶಾಭಾವನೆಯೊಂದಿಗೆ ತಮ್ಮ ನಾಯಕರ ಮೂಲಕ ಟಿಕೆಟ್‌ಗೆ ಪ್ರಯತ್ನ ಮುಂದುವರಿಸಿದ್ದಾರೆ. ತಮ್ಮ ಪರ ಪಕ್ಷದೊಳಗೆ ಬೆಂಬಲ ವ್ಯಕ್ತವಾಗು ವಂತೆ ಮಾಡುವ ಕಸರತ್ತು ಹಲವು ಆಕಾಂಕ್ಷಿಗಳಿಂದ ನಿರಂತರ ನಡೆಯುತ್ತಿದೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ದಂಡು

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ದೊಡ್ಡ ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಹೊರಗಾಗಿ ಯೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಲವು ಕೂಡ ಅಚ್ಚರಿಕರ ಆಯ್ಕೆಯ ನಿರೀಕ್ಷೆಯಲ್ಲಿರುವುದು ವಿಶೇಷವಾಗಿದೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಸಹಜ ಕುತೂಹಲವಿದೆ.

ಒಡಹುಟ್ಟಿದ ಸಹೋದರ ಎಂ.ಪಿ. ಸುಜಾ ಕುಶಾಲಪ್ಪ ಅವರಿಗಾಗಿ ಟಿಕೆಟ್ ತಪ್ಪಿಸಿಕೊಂಡ ವಿಧಾನ ಪರಿಷತ್ ನಿಕಟಪೂರ್ವ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ವಿರಾಜಪೇಟೆ ಕ್ಷೇತ್ರ ಮೇಲೆ ಕಣ್ಣಿಟ್ಟಿದ್ದಾರೆ. ಸುಜಾ ಕುಶಾಲಪ್ಪ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಸುನಿಲ್ ಸುಬ್ರಮಣಿ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಅವಕಾಶ ಪಡೆದುಕೊಂಡಿದ್ದರು. ಮತ್ತೊಂದು ಅವಧಿಗೆ ಸ್ಪರ್ಧಿಸುವ ಅವಕಾಶವನ್ನು ಸಹೋದರನ ಕಾರಣಕ್ಕಾಗಿ ತಪ್ಪಿ ಹೋಯಿತು.

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಕರ್ನಾಟಕ ಪಶ್ಚಿಮಘಟ್ಟ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ಎಂ. ರವೀಂದ್ರ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ
.
ಈ ಪೈಕಿ ತೇಲಪಂಡ ಶಿವಕುಮಾರ್ ನಾಣಯ್ಯ ರಾಜ್ಯ- ರಾಷ್ಟ್ರಮಟ್ಟದ ಮುಖಂಡರ ಗಮನ ಸೆಳೆಯುವ ಮೂಲಕ ಇತರೆ ಆಕಾಂಕ್ಷಿಗಳಿಗೆ ಚಡಪಡಿಕೆ ಮೂಡಿಸಿದ್ದಾರೆ. ಶಾಂತೆಯಂಡ ರವಿ ಕುಶಾಲಪ್ಪ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಬದಲಾವಣೆಗಾಗಿ ವಿರಾಜಪೇಟೆಯಲ್ಲಿ ಹೊಸ ಮುಖ ಎಂಬ ಪ್ರಚಾರ ನಿರಂತರ ನಡೆಯುತ್ತಿದೆ.