ಜಿಲ್ಲೆ

ವಿಶ್ವ ದಾಖಲೆಗೆ ಸಜ್ಜಾದ ಕೊಡವ ಕ್ಲಾನ್

reportermys

ವಿಜಯವಾಣಿ ಸುದ್ದಿಜಾಲ ವಿರಾಜಪೇಟೆ

ಕೊಡವರು ಒಂದೇ ಕುಲಕ್ಕೆ ಸಂಬಂಧ ಪಟ್ಟವರು ಎಂಬ ಹಿನ್ನೆಲೆಯಲ್ಲಿ ವಂಶವೃಕ್ಷ ಜೋಡಣೆ ಕಾರ್ಯಕ್ರಮ ಅಂಗವಾಗಿ ಶನಿವಾರ ಕೊಡವರ ಬೃಹತ್ ಸಮಾವೇಶ ’’ಒಕ್ಕೂಟ’’ ಬಿಟ್ಟಂಗಾಲದ ಕೂರ್ಗ್ ಎತ್ನಿಕ್‌ನಲ್ಲಿ ಆಯೋಜಿಸಲಾಗಿತ್ತು.

ಹಲವು ಕೊಡವ ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸಲಾಗಿದ್ದು, ಲಾರ್ಜೆಸ್ಟ್ ಫ್ಯಾಮಿಲಿ ಗ್ಯಾದರಿಂಗ್ ವಿಶ್ವ ದಾಖಲೆಗೆ ಸಂಬಂಧಿಸಿದ್ದಂತೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಿಂದ ಅಧಿಕೃತ ಮಾಹಿತಿ ಪ್ರಕಟವಾಗಬೇಕಿದೆ. ಕೊಡವ ಒಕ್ಕಗಳ ವಂಶಾವಳಿ ವೃಕ್ಷ ಒಂದಕ್ಕೊಂದು ನೇಯ್ದು ಎಲ್ಲಾ ಕೊಡವರು ಒಂದೇ ಕುಟುಂಬಕ್ಕೆ ಸೇರಿದವರೆಂದು ದೃಢೀಕರಣ ಪಡಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಕೊಡವ ಕ್ಲಾನ್ ಸಂಸ್ಥೆ ಇದೀಗ ವಿಶ್ವ ದಾಖಲೆ ಸನಿಹದಲ್ಲಿದೆ.

ಕೊಡವ ಕ್ಲಾನ್ ಸಂಸ್ಥಾಪಕ ಗುಮ್ಮಟ್ಟೀರ ಕಿಶು ಉತ್ತಪ್ಪ ಮುಂದಾಳತ್ವದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ೮ ವರ್ಷ ಗಳಿಂದ ಕೊಡವ ವಂಶವೃಕ್ಷ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ಇವರು ಇಡೀ ಕೊಡವ ಕುಲ ಒಂದೇ ಒಂದು ವಂಶವೃಕ್ಷದಡಿಯಲ್ಲಿ ಬರುತ್ತದೆ. ಈ ವಂಶವೃಕ್ಷವೇ ಅತ್ಯಂತ ದೊಡ್ಡ ಕುಟುಂಬ (ಕುಲ) ಎಂದು ವಿಶ್ವ ದಾಖಲೆ ಮಾಡುವತ್ತ ಈ ಪ್ರಯತ್ನ ನಡೆದಿದೆ.

ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಹೊಂದಿರುವ ಕೊಡವ ಕ್ಲಾನ್ ಸಂಸ್ಥೆ ಶನಿವಾರದ ವಿಶೇಷ ಕಾರ್ಯಕ್ರಮ ಮೂಲಕ ವಿಶ್ವ ದಾಖಲೆಗೆ ಹೊರಟಿದೆ. ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೬,೦೦೦ ಕ್ಕೂ ಅಧಿಕ ಜನ ಭಾಗವಹಿಸಿದ್ದು, ಹಲವಾರು ಭಿನ್ನ ಕಾರ್ಯ ಕ್ರಮಗಳಿಗೆ ಸಾಕ್ಷಿಯಾದರು.

ಕುಟುಂಬಗಳ ೫ ಸಾವಿರ ಜನರನ್ನು ಒಂದೆಡೆ ಸೇರಿಸಿ ಈಗಾಗಲೇ ಗಿನ್ನಿಸ್ ಬುಕ್‌ನಲ್ಲಿ ದಾಖಲಾಗಿರುವ ೪,೫೧೪ ಜನ ಸೇರಿ ಲಾರ್ಜೆಸ್ಟ್ ಫ್ಯಾಮಿಲಿ ಗ್ಯಾದರಿಂಗ್ ದಾಖಲೆ ಮುರಿಯುವ ಗುರಿ ಇದಾಗಿದೆ ಎಂದು ಕೊಡವ ಕ್ಲಾನ್ ಸಂಸ್ಥೆ ಸಂಸ್ಥಾಪಕ ಗುಮ್ಮಟಿರ ಕಿಶು ಉತ್ತಪ್ಪ ಮಾಹಿತಿ ನೀಡಿದ್ದಾರೆ.

ಫ್ರಾನ್ಸ್‌ನ ಒಲಿಮಿಯಾ ಕುಟುಂಬದ ೪,೫೧೪ ಜನ ಒಂದೆಡೆ ಸೇರಿದ ದಾಖಲೆ ಮುರಿಯುವುದಕ್ಕಾಗಿ ೫ ಸಾವಿರಕ್ಕೂ ಹೆಚ್ಚಿನ ಕೊಡವರನ್ನು ಸೇರಿಸ ಲಾಗಿದೆ. ಇಲ್ಲಿ ಬಂದು ಸೇರಿರುವ ಎಲ್ಲಾ ಕೊಡವರು ಒಂದೇ ಕುಟುಂಬದವರೆಂದು ದೃಢೀಕರಿಸಿ ಅನಾಭಾವ ಸಂಬಂಧ ಗಟ್ಟಿಗೊಳಿ ಸುವ ವಿಶ್ವಾಸ ಹೊಂದಿದ್ದೇವೆ. ಎಲ್ಲಾ ಕೊಡವರು ಒಂದೇ ಸ್ಥಳದಲ್ಲಿ ಸೇರುವ ಮೂಲಕ ಹೊಸ ವಿಶ್ವ ದಾಖಲೆ ಮಾಡಿದ್ದೇವೆ ಎಂದಿದ್ದಾರೆ.

ಕೊಡವ ಕ್ಲಾನ್ ಸಂಸ್ಥೆ ೮ ವರ್ಷಗಳಿಂದ ೨೧ ಸಾವಿರಕ್ಕೂ ಹೆಚ್ಚಿನ ಕೊಡವರು ಒಂದೇ ವಂಶ ವೃಕ್ಷದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು, ಈಗಾಗಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ೧೮ ತಲೆಮಾರಿನ ಒಟ್ಟು ೭೫೧ ಕೊಡವ ಕುಟುಂಬಗಳ ದಾಖಲೆಗಳು ಕೊಡವ ಕ್ಲಾನ್ ವಂಶವೃಕ್ಷದಲ್ಲಿದೆ ಎಂದು ಕಿಶು ಉತ್ತಪ್ಪ ತಿಳಿಸಿದರು.

ವಿಶೇಷ ಕಾರ್ಯಕ್ರಮದಲ್ಲಿ ಕೊಡವ ಸಾಹಿತಿಗಳು ಬರೆದಿರುವ ಪುಸ್ತಕಗಳ ಮಾರಾಟಕ್ಕಾಗಿ ಪ್ರತ್ಯೇಕ ಮಳಿಗೆ ವ್ಯವಸ್ಥೆ ಮಾಡಲಾಗಿತ್ತು.
ಹಲವು ಬಗೆಯ ವಸ್ತುಗಳ ಪ್ರದರ್ಶನದ ೩೦ಕ್ಕೂ ಅಧಿಕ ಮಳಿಗೆ ತೆರೆಯಲಾಗಿತ್ತು, ಆಹಾರ, ವಾಹನ, ಕೊಡವರ ಬಳಸುತ್ತಿದ್ದ ಆಭರಣ, ಉಡುಪು ಸೇರಿದಂತೆ ಹಲವಾರು ಮಳಿಗೆಗಳನ್ನು ತೆರೆದು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇದೇ ಸಂದರ್ಭ ವಿವಿಧ ಸ್ಪರ್ಧೆಗಳು, ಕೊಡವ ಸೂಪರ್ ಸಿಂಗರ್, ಕೊಡವ ವಾಲಗತ್ತಾಟ್, ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ನೇತೃತ್ವದಲ್ಲಿ ಫ್ಯಾಷನ್ ಶೋ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು. ಮುಲ್ಲೇರ ಜಿಮ್ಮಿ ಅಯ್ಯಪ್ಪ ನೆನಪಿನಲ್ಲಿ ಅವರ ಹಾಡುಗಳನ್ನು ಕೊಡಗಿನ ಖ್ಯಾತ ಗಾಯಕರು ಹಾಡುವ ಮೂಲಕ ಕೊಡವ ನೈಟ್ಸ್ ಕಾರ್ಯಕ್ರಮ ನಡೆಯಿತು.