Oplus_16908288 
ಜಿಲ್ಲೆ

ಕಲಿಕೆಯಲ್ಲಿ ಆಸಕ್ತಿ ಮೂಡಿಸಿಕೊಂಡರೆ ಬದುಕು ಸುಗಮ

ಎ. ಆರ್. ರಘುರಾಮ

ವಿರಾಜಪೇಟೆ : ಕಲಿಕೆಯಲ್ಲಿ ಆಸಕ್ತಿ ಮೂಡಿಸಿಕೊಂಡರೆ ಉನ್ನತ ಹುದ್ದೆಗಳನ್ನು ಪಡೆದುಕೊಂಡು ಸುಗಮ ಜೀವನ ನಡೆಸಬಹುದು ಎಂದು ಮುತ್ತಪ್ಪ ಮಲೆಯಾಳಿ ಸಮಾಜದ ಅಧ್ಯಕ್ಷ ಸುಮೇಶ ಸಲಹೆ ನೀಡಿದರು. ಇಲ್ಲಿನ ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜ ಹಾಗೂ ಪೋಷಕ ವೃಂದದಿಂದ ಮೀನುಪೇಟೆಯ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಕಲಾಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2024- 25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ಪಾಲಕರೂ ತಮ್ಮ ತಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕ ಪಡೆಯಲಿ. ಸಾಧನೆ ಮಾಡಲಿ. ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಲಿ ಎಂದು ಬಯಸುತ್ತಾರೆ. ಇದನ್ನು ಮಕ್ಕಳು ಸಾಧಿಸಿ ತೋರಿಸಲು ಶಾಲಾ ಹಂತದ ಜೀವನ ಒಂದು ಉತ್ತಮ ವೇದಿಕೆ ಎಂದು ಅವರು ಹೇಳಿದರು.ದೇಶಕ್ಕಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕೊಡಗಿನವರಿಗೆ ಅನಂತ ಅವಕಾಶಗಳಿವೆ. ಕ್ರೀಡಾ ರಂಗ ಸೇರಿದಂತೆ ಸಾಮಾಜಿಕ ಕ್ಷೇತ್ರದಲ್ಲಿಯೂ ಹಲವಾರು ಅವಕಾಶಗಳಿವೆ. ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಕೊಡಗಿನವರಿಗೆ ವಿಶೇಷ ಗೌರವ ದೊರಕುತ್ತದೆ. ಹಾಗಾಗಿ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸದೊಂದಿಗೆ ಉನ್ನತ ಹುದ್ದೆಗಳನ್ನು ಪಡೆಯಬೇಕು. ಈ ಮೂಲಕ ಜಿಲ್ಲೆಗೆ, ರಾಜ್ಯಕ್ಕೆ ಉತ್ತಮ ಹೆಸರು ತರುವ ಸಾಧನೆ ಹಾದಿಯಲ್ಲಿ ಸಾಗಬೇಕು ಎಂದರು.

ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಬಿಂದು ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡಬೇಕಾದರೆ ಮನೆಯಲ್ಲಿ ಪಾಲಕರ ಪ್ರೋತ್ಸಾಹ, ಶಿಕ್ಷಕರ ಪ್ರೇರಣೆ ಬಹು ಮುಖ್ಯ ಎಂದರು.

ಎಲ್ಲರ ಮನೆಯ ಮಕ್ಕಳನ್ನು ನಮ್ಮ ಮಕ್ಕಳೆಂದೇತಿಳಿದು ಶಿಕ್ಷಕರು ಪಾಠವನ್ನು ಮಾಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಅಂಕಗಳನ್ನು ಪಡೆಯಬೇಕು ಎಂದೇ ಆಶಿಸುತ್ತಾರೆ. ಅದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರ ಅಚ್ಚಕಾಳಿರ ಪಳಂಗಪ್ಪ, ಕಾವೇರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಸುದೇಶ, ಕಾರ್ಯದರ್ಶಿ ವಿನೋದ್, ಮಹಿಳಾ ಮಲೆಯಾಳಿ ಅಸೋಸಿಯೇಷನ್ ಅಧ್ಯಕ್ಷರಾದ ಶಿಭಾ ಪೃಥ್ವಿನಾಥ, ಶಿಕ್ಷಕಿ ಕವಿತಾ , ಮಲೆಯಾಳಿ ಸಮಾಜದ ಉಪಾಧ್ಯಕ್ಷ ಸಜೀವನ್, ಗೌರವಾಧ್ಯಕ್ಷರಾದ ಪದ್ಮನಾಭ, ಚೋಕಂಡ ಸಂಜು ಇತರರು ಉಪಸ್ಥಿತರಿದ್ದರು.