* ಮಾನವಸರಪಳಿ ರಚಿಸಿ ಆಕ್ರೋಶ * ತಹಸೀಲ್ದಾರ್‌ಗೆ ಮನವಿ * ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ವಿರಾಜಪೇಟೆ: ಹಿಂದುಗಳ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು, ಪಟ್ಟಭದ್ರ ಹಿತಾಸಕ್ತಿಗಳು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ರಾಜ್ಯ ಸರ್ಕಾರವೂ ಇದಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿದೆ ಎಂದು ತಾಲೂಕು ಬಿಜೆಪಿ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಗಡಿಯಾರ ಕಂಬದ ಬಳಿ ‘ ಧರ್ಮದ ಉಳಿವಿಗಾಗಿ ಧರ್ಮಯುದ್ಧ’ ಎಂಬ ಘೋಷವಾಕ್ಯದಡಿ ಧರ್ಮಸ್ಥಳ ಪ್ರಕರಣವನ್ನು ಖಂಡಿಸಿದ ಮುಖಂಡರು, ಮಾನವ ಸರಪಳಿ ನಿರ್ಮಿಸಿದ್ದರು. ಪ್ರಕರಣದ ಆರೋಪಿ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಕಾಣದ ಕೈಗಳು ಷಡ್ಯಂತ್ರ ರೂಪಿಸಿವೆ: ಕೊಡಗು- ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಸಂದರ್ಭ ಮಾತನಾಡಿ, ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗುವಂತೆ ಕಾಣದ ಕೈಗಳು ಷಡ್ಯಂತ್ರ ರೂಪಿಸಿವೆ. ಹಿಂದು ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿ, ಅಪಮಾನ ಮಾಡುವುದೇ ಇವರ ಕುತಂತ್ರವಾಗಿದೆ ಎಂದರು.
ಹೊರ ರಾಜ್ಯದವರ ಕೈವಾಡವಿದೆ: ನಮ್ಮ ಶ್ರದ್ಧಾ ಕೇಂದ್ರಗಳ ವಿರುದ್ಧ ಅಪಪ್ರಚಾರ ಮಾಡಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಧರ್ಮ ಕ್ಷೇತ್ರಗಳ ಮೇಲೆ ಅಪಪ್ರಚಾರಗಳು ನಡೆಯುವ ಸಂದರ್ಭದಲ್ಲಿ ಹಿಂದು ಗಳೆಲ್ಲರೂ ಒಂದಾಗಿ ಹೋರಾಟ ಮಾಡಬೇಕು. ಧಾರ್ಮಿಕ ತಾಣಗಳ ಮಹತ್ವ ಉಳಿವಿಗಾಗಿ ಹೋರಾಟಗಳು ಮುಖ್ಯ ಎಂದರು. ಅಪ ಪ್ರಚಾರದಲ್ಲಿ ತೊಡಗಿರುವ ವ್ಯಕ್ತಿಗಳಲ್ಲಿ ಹೊರ ರಾಜ್ಯದ ದುಷ್ಕರ್ಮಿಗಳ ಕೈವಾಡವೂ ಇದೆ. ಈ ಹಿನ್ನ್ನೆಲೆಯಲ್ಲಿ ಎಸ್‌ಐಟಿ ಯಿಂದ ಪಾರದರ್ಶಕ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ ಎಂದು ಸಂಸದ ಯದುವೀರ್ ಹೇಳಿದರು.
ಪರೋಕ್ಷ ಬೆಂಬಲ: ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಹಿಂದು ವಿರೋಧಿ ಸರ್ಕಾರ ಎಂಬುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ದೂರಿದರು. ಧರ್ಮದ ವಿರುದ್ಧ ಅಪಪ್ರಚಾರಕ್ಕೆ ನಿಂತಿರುವ ದುಷ್ಟ ಶಕ್ತಿಗಳಿಗೆ ಪರೋಕ್ಷವಾಗಿ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಅಪಪ್ರಚಾರ ಮಾಡಲು ರಾಜ್ಯದಲ್ಲಿ ದೊಡ್ಡ ಮಟ್ಟದ ಸಂಚು ರೂಪಿತವಾಗುತ್ತಿದೆ. ಈಗಲಾದರೂ ಹಿಂದುಗಳು ಎಚ್ಚೆತ್ತುಕೊಳ್ಳಬೇಕು. ಧರ್ಮದ ಉಳಿವಿಗಾಗಿ ನಮ್ಮ ಹೋರಾಟವಾಗಬೇಕು ಎಂದರು. ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್ ಮತ್ತು ಕಾಂತಿ ಸತೀಶ್ ಮಾತನಾಡಿದರು. ಮನವಿ: ಗಡಿಯಾರ ಕಂಬದ ಬಳಿಯಿಂದ ತಾಲೂಕು ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು, ತಹಸೀಲ್ದಾರ್ ಪ್ರವೀಣ್‌ಗೆ ಮನವಿ ಪತ್ರ ಸಲ್ಲಿಸ ಲಾಯಿತು.ಮುಖಂಡರಾದ ಸುವಿನ್ ಗಣಪತಿ, ನೆಲ್ಲಿರ ಚಲನ್ ಕುಮಾರ್, ಶಶಿ ಸುಬ್ರಮಣಿ, ರಘು ನಾಣಯ್ಯ ಸೇರಿದಂತೆ ಬಿಜೆಪಿ ವಿವಿಧ ಮಂಡಲಗಳ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.