ವಿರಾಜಪೇಟೆ : ವಿರಾಜಪೇಟೆ ಕಾವೇರಿ ಕಾಲೇಜಿನ ವತಿಯಿಂದ ಬಿ.ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನವಾದ ಗುರುವಾರ ಗ್ರಾಮ ಸ್ವಚ್ಛತೆ ಅಭಿಯಾನ ನಡೆಸಿದರು .
ಬಿ ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಶಿಬಿರಾರ್ಥಿಗಳ ಗ್ರಾಮ ಸ್ವಚ್ಛತೆ ಅಭಿಯಾನಕ್ಕೆ ಗ್ರಾಮ ಪಂಚಾಯಿತಿಯ ಪಿಡಿಒ ಪರಮೇಶ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಯುವ ಜನತೆ ದೇಶದ ಶಕ್ತಿ. ಯುವ ಜನರು ಬದಲಾದರೆ ಸಮಾಜ ಬದಲಾಗುತ್ತದೆ. ಪ್ರತಿಯೊಬ್ಬರೂ ಅವರವರ ಜವಾಬ್ದಾರಿ ಅರಿತು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿ ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು. ಒಣಕಸ ಹಾಗೂ ಹಸಿ ಕಸ ಬೇರ್ಪಡಿಸಿ ಸ್ವಚ್ಛತಾ ಕರ್ಮಿಗಳಿಗೂ ಸಹಾಯವಾಗುವಂತೆ ನಡೆದುಕೊಳ್ಳಬೇಕು. ಹಸಿ ಕಸವನ್ನು ಹೆಚ್ಚಿನ ಪ್ರಮಾಣದಲ್ಲಿ ಪುನರ್ ಬಳಕೆ ಮಾಡುವ ಕೆಲಸ ಹೆಚ್ಚು ಹೆಚ್ಚು ನಡೆದಾಗ ತ್ಯಾಜ್ಯದ ಪ್ರಮಾಣ ಕಡಿಮೆಯಾಗಿ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ಕಿವಿ ಮಾತು ಹೇಳಿದರು. ಮುಖ್ಯ ಶಿಕ್ಷಕಿ ಸುಜಾತಾ ಮಾತನಾಡಿ, ನಾವು ದೈಹಿಕ ಸ್ವಚ್ಛತೆಗೆ ಎಷ್ಟು ಸಮಯ ಕೊಡುತ್ತೇವೋ ಅಷ್ಟೇ ಪರಿಸರ ಸ್ವಚ್ಛತೆಗೂ ಪ್ರಾಮುಖ್ಯತೆ ಕೊಡಬೇಕು. ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿದ್ದರೆ ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಪ್ರತಿ ಊರಿನಲ್ಲೂ ಸಂಘ ಸಂಸ್ಥೆಗಳು ಸ್ವಯಂಸೇವಕರು ಇಂತಹ ಅಭಿಯಾನಗಳನ್ನು ನಡೆಸಿದರೆ ಗ್ರಾಮಗಳು ಸ್ವಚ್ಛವಾಗುತ್ತದೆ ಎಂದರು.