ಜಿಲ್ಲೆ

ಸಡಗರದ ವೀರಭದ್ರೇಶ್ವರ ರಥೋತ್ಸವ

ನರೇಗಲ್ಲ: ಪಟ್ಟಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥ ಸಾಗುವ ಬೀದಿಯನ್ನು ಶುಚಿಗೊಳಿಸಿ ರಂಗೋಲಿ ಬಿಡಿಸಿದ್ದರು. ಭಕ್ತರು ಹರ ಹರ ಮಹಾದೇವ, ಶ್ರೀ ವೀರಭದ್ರೇಶ್ವರ ಮಹಾರಾಜ್ ಕೀ ಜೈ ಎಂದು ಜಯಘೋಷ ಹಾಕುತ್ತ ರಥವನ್ನು ಎಳೆದರು. ರಸ್ತೆಯ ಇಕ್ಕೆಲಗಳಲ್ಲಿ, ಮನೆ ಮುಂದೆ, ಮಹಡಿ ಮೇಲೆ ಮಹಿಳೆಯರು, ಮಕ್ಕಳು, ಓಣಿಯ ಭಕ್ತರು ನಿಂತು ರಥೋತ್ಸವ ಕಣ್ತುಂಬಿಕೊಂಡರು. ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.

ರಥೋತ್ಸವವು ಭಜನೆ, ಝಾಂಜ್‌ಮೇಳ, ಡೊಳ್ಳು, ಸಕಲ ವಾದ್ಯ ವೈಭವದೊಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಣೇಶ ದೇವಸ್ಥಾನದ ಮೂಲಕ ವೀರಣ್ಣನ ಪಾದಗಟ್ಟೆ ತಲುಪಿ ಸ್ಥಾನಕ್ಕೆ ಬಂದು ತಲುಪಿತು. ನರೇಗಲ್ಲ ಹಾಗೂ ಕೊಡಿಕೊಪ್ಪ, ತೋಟಗಂಟಿ, ಮಲ್ಲಾಪುರ, ದ್ಯಾಂಪುರ, ಕೊಚಲಾಪೂರ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.