ಜಿಲ್ಲೆ

ವಿಪ್ರ ಮಹಿಳೆಯರು ಉದ್ಯಮಿಪತಿಗಳಾಗಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ವಿಪ್ರ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಜತೆಗೆ ಉದ್ಯಮಪತಿಗಳಾಗುವತ್ತ ಗಮನ ಹರಿಸುವಂತೆ ಕೈಗಾರಿಕೋದ್ಯಮಿ ಪದ್ಮಶೇಷಾದ್ರಿ ಹೇಳಿದರು.

ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಜಿಲ್ಲಾ ಬ್ರಾಹ್ಮಣಸಭಾದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಪ್ರ ಮಹಿಳಾ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲಸಕ್ಕಾಗಿ ಕೈಚಾಚುವ ಬದಲು ಉದ್ಯೋಗ ಸೃಷ್ಟಿಸುವ ಉದ್ಯಮವನ್ನು ಸ್ಥಾಪಿಸುವುದು ಸೂಕ್ತ, ಇಂದಿನ ಜನರ ನಾಡಿ ಮಿಡಿತ ತಿಳಿದುಕೊಂಡು ಗ್ರಾಹಕರಿಗೆ ಅಗತ್ಯವಿರುವ ಅವರು ಇಷ್ಟಪಡುವಂತಹ ಸಾಮಗ್ರಿಗಳನ್ನು ಹಾಗೂ ಸೇವೆಯನ್ನು ನೀಡಿದರೆ ಉದ್ಯಮ ಪತಿಗಳಾಗಿ ಯಸ್ವಿಯಾಗಬಹುದು ಎಂದರು.

ಸರ್ಕಾರ ನೀಡುತ್ತಿರುವ ಹಲವಾರು ಸೌಲಭ್ಯಗಳನ್ನು ಸವಲತ್ತುಗಳನ್ನು ಬಳಸಿಕೊಂಡು ಬ್ಯಾಂಕ್​ ನಿಂದ ಸಾಲ ಪಡೆದು ಉದ್ಯಮಸ್ಥಾಪಿಸಬಹುದು. ನಾವು ಒದಗಿಸುವ ಸೇವೆಯಲ್ಲಿ ಹಾಗೂ ನಾವು ಒದಗಿಸುವ ವಸ್ತುಗಳಲ್ಲಿ ಗುಣಮಟ್ಟವನ್ನು ಕಾಯ್ದಿಟ್ಟುಕೊಳ್ಳುವುದು ಬಹಳ ಮುಖ್ಯ. ಗುಣಾತ್ಮಕ ವಸ್ತುಗಳನ್ನು ಖದಿಸಲು ಗ್ರಾಹಕರು ಎಂದಿಗೂ ಹಿಂದೇಟು ಹಾಕುವುದಿಲ್ಲ. ಉತ್ತಮ ಯೋಜನೆಯನ್ನು ಮಾಡಿ ಬಿಸಿನೆಸ್​ ಆರಂಭಿಸಬೇಕು. ಯೋಜನೆ ಇಲ್ಲದೆ ಯಾವುದೇ ಕಾರ್ಯವನ್ನು ಮಾಡುವುದು ಸೂಕ್ತವಲ್ಲ. ಇಡೀ ಭಾರತ ಯುವಜನತೆ ಕೈಯಲ್ಲಿದೆ, ಯುವಕರ ಬಳಿ ಸೂಕ್ತವಾದ ಬಿಸಿನೆಸ್​ ಐಡಿಯಾ ಇದ್ದಲ್ಲಿ ಹೂಡಿಕೆದಾರರು ತಯಾರಾಗಿರುತ್ತಾರೆ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದೇ ರೀತಿಯಾದ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಿದೆ. ಇದರ ಸದುಪಯೋಗವನ್ನು ಎಲ್ಲಾ ವಿಪ್ರ ಬಾಂಧವರು ಪಡೆದುಕೊಳ್ಳಬೇಕು. ಆರ್ಥಿಕ, ಸಾಮಾಜಿಕವಾಗಿ ನಮ್ಮ ಹಿರಿಮೆಯನ್ನು ಬೆಳೆಸಬೇಕು ಎಂದು ಜಿಲ್ಲಾ ಬ್ರಾಹ್ಮಣಸಭಾ ಅಧ್ಯಕ್ಷ ಎಚ್​.ಎನ್​.ಚಂದ್ರಶೇಖರ್​ ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ. ಹರೀಶ್​, ಜಿಲ್ಲಾ ಬ್ರಾಹ್ಮಣಮಹಾಸಭಾದ ಉಪಾಧ್ಯಕ್ಷ ಸುಭಾಷಿಣಿ ರವೀಶ್​, ಜಂಟಿ ಕಾರ್ಯದರ್ಶಿ ಚಂದ್ರಶೇಖರ್​, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್​, ಜಿಲ್ಲಾ ಬ್ರಾಹ್ಮಣಸಭಾ ನಿರ್ದೇಶಕ ಜಿ.ಕೃಷ್ಣಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಶ್ರೀದೇವಿ, ಸೌಮ್ಯ, ಜೆ. ಶ್ರೀಹರಿ, ಉಷಾರಾಣಿ, ಗುರುಪ್ರಕಾಶ ಬಳ್ಳುಕರಾಯ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಸಂತೆಯಲ್ಲಿ ಸುಮಾರು 25ಕ್ಕು ಹೆಚ್ಚು ವಿಪ್ರ ಮಹಿಳೆಯರು ಕುಟೀರಗಳನ್ನು ನಿರ್ಮಿಸಿಕೊಂಡು ವ್ಯಾಪಾರ ನಡೆಸಿದರು.