ಜಿಲ್ಲೆ

ದೌರ್ಜನ್ಯ ತಡೆ ಭಾಷಣಕ್ಕೆ ಸೀಮಿತ ಆಗದಿರಲಿ

Chitradurga

ಚಿತ್ರದುರ್ಗ: ಪರಿಶಿಷ್ಟ ಜಾತಿ ಮತ್ತು ವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆಗಾಗಿ ಏರ್ಪಡಿಸುವ ಕಾರ್ಯಕ್ರಮಗಳು ಕೇವಲ ಭಾಷಣಕ್ಕೆ ಸೀಮಿತ ಆಗದಿರಲಿ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಬುಧವಾರ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ನಾಟಕ, ಹಾಡು ಹಾಗೂ ಕಾನೂನು ತಿಳಿವಳಿಕೆಗಳೊಂದಿಗೆ ಅರ್ಥಪೂರ್ಣವಾಗಿ ಜಾಗೃತಿ ಕಾರ್ಯಕ್ರಮಗಳು ಆಯೋಜಿಸಬೇಕು ಎಂದರು.

ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕೆ ಜಾಗೃತಿ ಅಗತ್ಯ. ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕಾರ‌್ಯಕ್ರಮಗಳನ್ನು ನಿರಂತರ ನಡೆಸಬೇಕು ಎಂದು ಹೇಳಿದರು.

ಚಳ್ಳಕೆರೆ, ಮೊಳಕಾಲ್ಮೂರು ತಾಲೂಕು ಸೇರಿ ಎಸ್ಸಿ, ಎಸ್ಟಿ ಸಮುದಾಯ ಹೆಚ್ಚಿರುವ ಹಳ್ಳಿಗಳಲ್ಲಿ ಸಮಿತಿ ಸದಸ್ಯರೊಂದಿಗೆ ಜಾಗೃತಿ ಮೂಡಿಸಬೇಕು. ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಗೂ ತ್ವರಿತವಾಗಿ ಪರಿಹಾರ ವಿತರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಮೆಟ್ರಿಕ್‌ಪೂರ್ವ, ಮೆಟ್ರಿಕ್ ನಂತರ ಹಾಗೂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಸಂಖ್ಯೆ, ವಿದ್ಯಾರ್ಥಿ ವೇತನಕ್ಕೆ ಎಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ? ಅರ್ಜಿ ಸಲ್ಲಿಸದವರ ಸಂಖ್ಯೆ ವಿವರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಮಿತಿ ಸದಸ್ಯ ಡಿ.ಒ.ಮೊರಾರ್ಜಿ ಮಾತನಾಡಿ, ಮೊಳಕಾಲ್ಮೂರು ತಾಲೂಕಿನಲ್ಲಿ ಹೆಚ್ಚು ಅಸ್ಪಶ್ಯತೆ ಆಚರಣೆ, ದೌರ್ಜನ್ಯಗಳಾಗುತ್ತಿರುವ ದೂರುಗಳಿವೆ. ಕಂದಾಯ, ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಜಾಗೃತಿ ಮೂಡಿಸಬೇಕು. ದೌರ್ಜನ್ಯ ಪ್ರಕರಣಗಳಾಗದ ಂತೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಜಾಗೃತಿ ಕಾರ‌್ಯಕ್ರಮಗಳ ಆಯೋಜನೆ ಸಂದರ್ಭದಲ್ಲಿ ಸದಸ್ಯರ ಗಮನಕ್ಕೆ ತರಬೇಕೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಾಳ್ ಮಾತನಾಡಿ, 2023ರ ಜನವರಿ 1ರಿಂದ ಮಾರ್ಚ್ 10ರವರೆಗೆ 23 ಪ್ರಕರಣಗಳು ದಾಖಲಾಗಿವೆ. 36 ಸಂತ್ರಸ್ಥರಿಗೆ 29,81,250 ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಯ 19 ಹಾಗೂ ಪರಿಶಿಷ್ಟ ವರ್ಗಕ್ಕೆ ಸಂಬಂಧಿಸಿದಂತೆ 4 ಪ್ರಕರಣಗಳು ದಾಖಲಾಗಿವೆ. ಒಂದು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಲಕ್ಷ ರೂ., ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯಾದ ಒಂದು ಪ್ರಕರಣಕ್ಕೆ 2,06,250 ರೂ. ಪರಿಹಾರ ವಿತರಿಸಲಾಗಿದೆ. 21 ಜಾತಿ ನಿಂದನೆ, ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ 26,75,000 ರೂ.ಪರಿಹಾರ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ಕಚೇರಿಯಲ್ಲಿ ಫೆಬ್ರವರಿ-2023ರ ಅಂತ್ಯಕ್ಕೆ 80 ಪ್ರಕರಣಗಳು ಬಾಕಿ ಇವೆ. ಫೆಬ್ರವರಿಯಲ್ಲಿ ಸ್ವೀಕರಿಸಿದ್ದ 2 ಪ್ರಕರಣಗಳನ್ನು ವಿಲೇ ಮಾಡಲಾಗಿದೆ ಎಂದರು.

ಜಿಪಂ ಸಿಇಒ ಎಂ.ಎಸ್.ದಿವಾಕರ್,ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್‌ಹೆಬ್ಬಾಳ್,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾ ರಿ ನಾಗೇಂದ್ರನಾಯ್ಕ,ಸಮಿತಿ ಸದಸ್ಯರಾದ ಎಂ.ಡಿ.ನವಕೋಟಿ,ಬೋರಸ್ವಾಮಿ,ಒ.ಚಿನ್ನಪ್ಪ,ಬಿ.ಗುಜ್ಜಾರಪ್ಪ ಹಾಗೂ ಅಧಿಕಾರಿಗಳಿದ್ದರು.

*ಕೋಟ್

ಹಿರಿಯೂರು ತಾ. ಕಂಬತ್ತನಹಳ್ಳಿ, ಶಿವನಗರ, ಹೊಸದುರ್ಗ ತಾ. ಜಂತಿಕೊಳಲು, ದೊಡ್ಡಘಟ್ಟದಲ್ಲಿ ನಡೆದಿದೆ ಎನ್ನಲಾದ ಸಾಮಾಜಿಕ ಬಹಿಷ್ಕಾರದ ಪ್ರಕರಣಗಳ ಕುರಿತು ವರದಿ ಹಾಗೂ ಸಂತ್ರಸ್ತರ ವಿವರವನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಗೆ ಕೂಡಲೇ ಸಲ್ಲಿಸಬೇಕು. ಚಳ್ಳಕೆರೆ ತಾ. ದೊಡ್ಡಬೀರನಹಳ್ಳಿ, ಕೂನಿಗರಹಳ್ಳಿ ಬಹಿಷ್ಕಾರ ಪ್ರಕರಣಗಳ ಕುರಿತ ವರದಿ ವಾರದೊಳಗೆ ಸಿದ್ಧಪಡಿಸಬೇಕು.

ಜಿಆರ್‌ಜೆ ದಿವ್ಯಾಪ್ರಭು ಜಿಲ್ಲಾಧಿಕಾರಿ, ಚಿತ್ರದುರ್ಗ