ಎನ್.ಆರ್.ಪುರ: ನಮ್ಮ ದೇಶ ಉತ್ತಮ ಸಂಸ್ಕೃತಿ, ಸಂಸ್ಕಾರ ಹೊಂದಿರುವ ದೇಶವಾಗಿದ್ದು ಹೆಣ್ಣಿಗೆ ವಿಶೇಷ ಗೌರವ, ಸ್ಥಾನಮಾನವಿದೆ. ಆದರೂ ಹೆಣ್ಣು ಮಕ್ಕಳ ರಕ್ಷಣೆ ಮಾಡದಂತಹ ಸ್ಥಿತಿ ತಲುಪಿದ್ದೇವೆ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಹದಿಹರೆಯದ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಉಪನ್ಯಾಸ ನೀಡಿದ ಅವರು, ಭಾರತ ದೇಶ ಅಭಿವೃದ್ಧಿ ಹೊಂದಿದೆ. ಮಹಿಳೆಯರಿಗೆ ಶಿಕ್ಷಣ ಸಿಕ್ಕಿದೆ.ಆದರೂ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮುಂದುವರಿದಿರುವುದು ವಿಷಾದನೀಯ ಎಂದರು.
19 ವರ್ಷದವರೆಗೆ ಯುವತಿಯರ ಮನಸ್ಸು ಸದಾ ಚಂಚಲವಾಗಿರುತ್ತದೆ. ನಂತರ ಮನಸ್ಸು ಸ್ವಲ ಹತೋಟಿಗೆ ಬರುತ್ತದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಯುವತಿಯರಿಗೆ ಪೌಷ್ಠಕ ಆಹಾರ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯದ ಮೂಲೆ, ಮೂಲೆಯಲ್ಲೂ ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ. ಜಾತಿ, ಮತ ಭೇದವಿಲ್ಲದೆ ಕನ್ನಡದ ಮನಸ್ಸುಗಳು ಒಂದಾಗಿ ಕನ್ನಡದ ತೇರನ್ನು ಎಳೆಯಲಾಗುತ್ತಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕಸಾಪ ನಡಿಗೆ ಹಳ್ಳಿಯ ಕಡೆಗೆ ಎಂಬ ಘೋಷಣೆಯೊಂದಿಗೆ ಈಗಾಗಲೇ ಹಲವು ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಿ ಅಲ್ಲಿನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.
ಆಡಳಿತಾಧಿಕಾರಿ ಸಿಸ್ಟರ್ ಜೆಸಿಲಿನ್, ತರಬೇತಿ ಮೇಲ್ವೀಚಾರಕಿ ಸಿಸ್ಟಿರ್ ನೋಯಲ್, ತಾಲೂಕು ಕಸಾಪ ಕೋಶಾಧಿಕಾರಿ ಕೆ.ಎಸ್.ರಾಜಕುಮಾರ್, ಸಾಹಿತಿ ಜಯಮ್ಮ, ಪಿ.ಸಿ.ಮ್ಯಾಥ್ಯೂ, ದರ್ಶನ್, ಭಾನುಮತಿ ಇದ್ದರು.