ಜಿಲ್ಲೆ

ಹೆಚ್ಚುತ್ತಿವೆ ಹಿರಿಯರ ಮೇಲಿನ ದೌರ್ಜನ್ಯಗಳು

ಪ್ರಶಾಂತ ಹೂಗಾರ

ಅಥಣಿ: ಹಿರಿಯ ನಾಗರಿಕರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದ್ದು ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದು ಅಥಣಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ.ರವಿಕುಮಾರ ಹೇಳಿದರು.

ತಾಲೂಕಿನ ಭರಮಖೋಡಿ ಗ್ರಾಮದ ಸುಕನ್ಯಾ ವೃದ್ಧಾಶ್ರಮದಲ್ಲಿ ಕಾನೂನು ಸೇವಾ ಸಮಿತಿ ಅಥಣಿ, ನ್ಯಾಯವಾದಿಗಳ ಸಂಘ ಮತ್ತು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಜಾಗೃತಿ ಅಭಿಯಾನ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರನ್ನು ಮನೆಯಿಂದ ಹೊರಗೆ ಹಾಕಲಾಗುತ್ತಿದ್ದು, ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿವೆ. ಅವರ ರಕ್ಷಣೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾನೂನು ಸೇವಾ ಸಮಿತಿ ಮುಂದಾಗಬೇಕು. ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ಇಲ್ಲವೆ ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದರು.

ಜೆಎಂಎಫ್‌ಸಿ ನ್ಯಾಯಾಧೀಶ ಎಚ್. ಓಂಕಾರಮೂರ್ತಿ ಮಾತನಾಡಿ, ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಮಾನಸಿಕ, ದೈಹಿಕ, ಆರ್ಥಿಕ ಮತ್ತು ಭಾವನಾತ್ಮಕ ಹಿಂಸೆ ಒಳಗೊಂಡಿರುತ್ತದೆ. ಇಂತಹ ಘಟನೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಹಸೀಲ್ದಾರಗೆ ಮಾಹಿತಿ ನೀಡಬಹುದು ಎಂದರು.

ಸುಕನ್ಯಾ ವೃದ್ಧಾಶ್ರಮಕ್ಕೆ ಆಹಾರ ಧ್ಯಾನದ ಕಿಟ್ ಮತ್ತು ಬಟ್ಟೆಗಳನ್ನು ವಿತರಿಸಲಾಯಿತು. ನ್ಯಾಯಾಧೀಶ ಇ.ಎಸ್.ಈರಣ್ಣ, ಜನವಾಡದ ಮಲ್ಲಿಕಾರ್ಜುನ ದೇವರು, ವಕೀಲರ ಸಂಘದ ಅಧ್ಯಕ್ಷ ನಿಂಗಪ್ಪ ಖೋಕಲೆ, ವಕೀಲರಾದ ಕಲ್ಲಪ್ಪ ವನಜೋಳ, ಬಸವರಾಜ ಡಂಗಿ, ಪಿ.ಜಿ.ಬಿಸಗುಪ್ಪಿ, ಬಿ.ಬಿ.ಬಿಸಲಾಪುರ, ಆರ್.ಎಸ್.ಪಾಟೀಲ, ಎಂ.ಎಂ.ಹತ್ತಿಕಟಗಿ, ಡಾ.ಸಿ.ಎ.ಶಂಕ್ರಟ್ಟಿ, ಸಿಡಿಪಿಒ ಮಂಜುನಾಥ ಸೌಂದಲಗೇಕರ, ಮಹಾದೇವ ಬಿರಾದಾರ, ಭಾಗ್ಯವಂತಿ ಬಿರಾದಾರ, ಈರಣ್ಣ ಅಡಗಲ ಇತರರಿದ್ದರು.