ಮೈಸೂರು: ಸಂವಿಧಾನ, ಪ್ರಜಾಪ್ರಭುತ್ವ ಕಾಪಾಡುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದವರಿಂದಲೇ ಸಂವಿಧಾನ, ಪ್ರಜಾಪ್ರಭುತ್ವ ಉಲ್ಲಂಘನೆ ಅಗುತ್ತಿದೆ ಎಂದು ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.
ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ನಿಂದ ನಗರದ ಬಲ್ಲಾಳ್ ವೃತ್ತದ ಬಳಿ ಇರುವ ಬುದ್ಧವಿಹಾರ ಕೇಂದ್ರದಲ್ಲಿ ಶಿಕ್ಷಣದ ವ್ಯಾಪಾರೀಕರಣ ವಿರೋಧಿಸಿ, ರಾಜ್ಯ ಶಿಕ್ಷಣ ನೀತಿ ಸಮರ್ಪಕ ಜಾರಿ, ಶಿಕ್ಷಣ ಬಲವರ್ಧನೆಗೆ ಒತ್ತಾಯಿಸಿ ಶನಿವಾರ ಆಯೋಜಿಸಿದ್ದ 12ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಜನನಾಯಕರು ಜನರ ಮಧ್ಯೆ ಇದ್ದರೆ, ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಗಳು ಇಂದು ನಮ್ಮನ್ನು ಆಳುತ್ತಿದ್ದಾರೆ. ಇದರಿಂದ ಎಲ್ಲವೂ ಉಲ್ಲಂಘನೆ ಅಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುತ್ತದೆಯೇ ಎನ್ನುವ ಅನುಮಾನ ಕಾಡತೊಡಗಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಜನರೇ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ವೋಟು ಹಾಕುವವರೆಗೆ ಕಾಲು ಬೀಳುತ್ತಾರೆ. ಕೈ ಮುಗಿಯುತ್ತಾರೆ. ಆದರೆ ಮತ ಹಾಕಿದ ಬಳಿಕ ಅವರೇ ಪ್ರಭುಗಳಾಗುತ್ತಿದ್ದಾರೆ. ರಾಜಪ್ರಭುತ್ವ ಬೇಡ ಎಂದು ಸ್ವಾತಂತ್ರೃ ಪಡೆದ ದೇಶದಲ್ಲಿ ಮತ್ತೊಂದು ರೀತಿಯಲ್ಲಿ ರಾಜಪ್ರಭುತ್ವ ಇದೆ ಎಂದರು.
ಯುವಕರಲ್ಲಿ ಆಲೋಚನಾ ಶಕ್ತಿ ಕಡಿಮೆ ಅಗುತ್ತಿದೆ. ಶಿಕ್ಷಣ ಎಂದರೆ ಕೇವಲ ಮೊಬೈಲ್ ಮಾಹಿತಿ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಸೃಜನಶೀಲತೆ ಇಲ್ಲವಾಗಿದೆ. ಕವಿ ಗುಲ್ಜಾರ್ ಅವರ ಕಬಿ ಕಬಿ ಹಾಡು ಕನ್ನಡದಲ್ಲಿ ಅನಿಸುತಿದೆ ಯಾಕೋ ಎಂದು ಹಾಡು ಬರಲು 20 ವರ್ಷ ಬೇಕಾಯಿತು. ಕನ್ನಡದಲ್ಲಿ ಮೂಲ ಉಳಿದಿಲ್ಲ. ಬರೀ ರೂಪಾಂತರ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಜಗತ್ತಿಗೆ ಅದ್ಭುತವಾಗಿ ಕಾಣುವ ಗಾಂಧಿಯನ್ನು ಗೋಡ್ಸೆ ಒಂದು ಬಾರಿ ಗುಂಡಿಕ್ಕಿ ಕೊಂದರೆ, ಇಂದಿನ ಜನಾಂಗ, ರಾಜಕಾರಣಿಗಳು ನಿತ್ಯ ಕೊಲ್ಲುತ್ತಿದ್ದಾರೆ. ಹಾಗೆಯೇ ಸಂವಿಧಾನವನ್ನು ಕೂಡ ಕೊಲ್ಲಲಾಗುತ್ತಿದೆ ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ 150 ಕ್ಷೇತ್ರಗಳ ಶೇಕಡವಾರು ಮತದಾನವನ್ನೇ ಚುನಾವಣಾ ಆಯೋಗ ಬಹಿರಂಗ ಪಡಿಸಲಿಲ್ಲ. ಚುನಾವಣೆ ಎಷ್ಟು ಪಾರದರ್ಶಕವಾಗಿ ನಡೆದಿದೆ ಎನ್ನ್ನುವುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.
ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಭೀಮನಗೌಡ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರ ಇಂದು ವ್ಯಾಪಾರೀಕರಣವಾಗಿದ್ದು, ಸಾಮಾನ್ಯರಿಗೆ ಸೌಲಭ್ಯ ಇಲ್ಲ ಎನ್ನುವಂತಾಗಿದೆ. ನುಡಿದಂತೆ ನಡೆದ ಸರ್ಕಾರ ಎಂದು ಹೇಳುವ ಕಾಂಗ್ರೆಸ್ ಕೂಡಾ ವಿದ್ಯಾರ್ಥಿ ವೇತನ, ವಿದ್ಯಾರ್ಥಿನಿಲಯ ಇಲ್ಲದ ಹಿಂದುಳಿದ ವರ್ಗದವರಿಗೆ ಹಣ ನೀಡಿಲ್ಲ ಎಂದು ದೂರಿದರು.
ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳಲ್ಲಿಯೇ ಭಿನ್ನಮತ ಬಿತ್ತಿ ಒಡೆದು ಆಳುವ ಕೆಲಸ ಅಗುತ್ತಿದೆ. ವಸ್ತ್ರ ಸಂಹಿತೆ ಹೆಸರಿನಲ್ಲಿ ಶಾಲಾ, ಕಾಲೇಜು ಆವರಣದಲ್ಲಿ ಗಲಭೆ ಸೃಷ್ಟಿಸಲಾಗುತ್ತಿದೆ. ಪ್ರಾಥಮಿಕ, ಪ್ರೌಢಶಾಲೆ ಬಳಿಕ ದುಬಾರಿ ಶುಲ್ಕದ ಪರಿಣಾಮ ಶಿಕ್ಷಣ ವಂಚಿತರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದರ ಬಗ್ಗೆ ಯಾರು ಗಂಭೀರವಾಗಿ ಚಿಂತಿಸುತ್ತಿಲ್ಲ ಎಂದರು.
ವಿದ್ಯಾರ್ಥಿಗಳು ಸಂಘಟಿತರಾಗಬೇಕು. ಪಠ್ಯಕ್ಕೆ ಮಾತ್ರ ಸೀಮಿತಗೊಳ್ಳದೆ ಸಮಾಜದಲ್ಲಿ ಅಗು, ಹೋಗುಗಳು, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಶಿಕ್ಷಣದಲ್ಲಿನ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಟಿ.ಎಸ್.ವಿಜಯಕುಮಾರ್, ಕಾರ್ಯದರ್ಶಿ ಅಭಿ, ವಿದ್ಯಾರ್ಥಿನಿಯರ ಸಮಿತಿ ಪ್ರಮುಖರಾದ ಎಂ.ಎನ್.ದೀಕ್ಷಿತಾ, ವಿವಿಧ ಸಮಿತಿಯ ಜೀವನ್, ಚಿರಾಗ್ ಇತರರು ಇದ್ದರು.