ಜಿಲ್ಲೆ

ಕೊಠಡಿ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ

ಪುತ್ತೂರು ಗ್ರಾಮಾಂತರ: ಕೊಳ್ತಿಗೆ ಗ್ರಾಮದ ಮಣಿಕ್ಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶಾಲೆ ಮುಖ್ಯಶಿಕ್ಷಕಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮಣಿಕ್ಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.30ರಂದು ಶಾಲೆ ನೂತನ ಕೊಠಡಿ ಉದ್ಘಾಟನಾ ಕಾರ್ಯಕ್ರಮ ನಡೆದಿತ್ತು. ಮಾಜಿ ಶಾಸಕ ಸಂಜೀವ ಮಠಂದೂರು ಕೊಠಡಿ ಉದ್ಘಾಟಿಸಿದ್ದರು. ಶಾಲಾ ನೂತನ ಕೊಠಡಿ ಉದ್ಘಾಟನೆ ವಿಚಾರದಲ್ಲಿ ಸರ್ಕಾರಿ ಶಿಷ್ಟಾಚಾರ ಉಲ್ಲಂಘಿಸಿರುವ ಆರೋಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಖ್ಯಶಿಕ್ಷಕಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಜ.7ರಂದು ಶಾಲೆ ನೂತನ ಕೊಠಡಿ ಉದ್ಘಾಟನೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶಾಸಕ ಅಶೋಕ್‌ಕುಮಾರ್ ರೈ ತೆರಳಿದ್ದ ವೇಳೆ ಅವರಿಗೆ ಮೊದಲೇ ನೂತನ ಶಾಲಾ ಕೊಠಡಿ ಉದ್ಘಾಟಿಸಿರುವ ವಿಚಾರ ತಿಳಿದು ಬಂದಿತ್ತು. ಶಿಷ್ಟಾಚಾರ ವ್ಯಾಪ್ತಿಗೆ ಒಳಪಡದ ಮಾಜಿ ಶಾಸಕರು ನೂತನ ಕೊಠಡಿ ಉದ್ಘಾಟನೆ ಮಾಡಿರುವ ವಿಚಾರ ಸಭೆಯಲ್ಲೇ ಪ್ರಸ್ತಾಪಿಸಿದ್ದ ಅಶೋಕ್ ಕುಮಾರ್ ರೈ, ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಖ್ಯಶಿಕ್ಷಕಿಗೆ ನೋಟಿಸ್ ಜಾರಿ ಮಾಡಿದ್ದಾರೆ.