ಲಿಂಗಸುಗೂರು: ಗಣೇಶೋತ್ಸವ ಆಚರಣೆಗೆ ತಾಲೂಕಿನಲ್ಲಿ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ. ಸೆ.19 ರಂದು ಚತುರ್ಥಿ ಆಚರಿಸಲಾಗುತ್ತಿದೆ. ಇದಕ್ಕಾಗಿ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ.
ನಾನಾ ಸಂಘ-ಸಂಸ್ಥೆಗಳು ನಿಗದಿತ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ಕೈಗೊಂಡಿದ್ದಾರೆ. ಮೂರ್ತಿ ತಯಾರಕರು ಕಳೆದ ಏಳೆಂಟು ತಿಂಗಳಿಂದ ತಯಾರಿಸಿಕೊಂಡು ಬಂದಿರುವ ಮೂರ್ತಿಗಳು ಪ್ರತಿಷ್ಠಾಪನೆಗೆ ಕಾಯುತ್ತಿವೆ. ಗಣೇಶೋತ್ಸವದಲ್ಲಿ ವಕ್ರತುಂಡನಿಗೂ ಕಲಾವಿದರಿಗೂ ವಿಶೇಷ ನಂಟು ಇರುತ್ತದೆ. ಪ್ರತಿವರ್ಷ ನವನವೀನವಾಗಿ ರೂಪುಗೊಂಡು ಜನಮನದಲ್ಲಿ ಉತ್ಸಾಹ ತುಂಬುತ್ತಾನೆ ಗಣೇಶ.
ಮನೆಗಳಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಷ್ಠಾಪಿಸಲು ಗ್ರಾಹಕರು ಮೂರ್ತಿ ತಯಾರಕರಿಗೆ ಮುಂಗಡ ಹಣ ನೀಡಿದ್ದಾರೆ. ಪಟ್ಟಣದ ವಿವಿಧೆಡೆ ಕಲಾವಿದರು ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಶಹಾಬಾದ್ ಮೂಲದ ದೇವರಾಜ, ವಿನಾಯಕ ಛತ್ರಬಂದ್ ಎರಡು ದಶಕದಿಂದ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ. 6 ರಿಂದ 15 ಅಡಿ ಎತ್ತರದ ಮತ್ತು 500 ರೂಪಾಯಿಯಿಂದ 25 ಸಾವಿರ ರೂಪಾಯಿವರೆಗಿನ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ.