ಜಿಲ್ಲೆ

ಬಂಡವಾಳಶಾಹಿ ವಶದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರ: ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಬೇಸರ

ಪಂಕಜ ಕೆ.ಎಂ.

ಬೆಂಗಳೂರು: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಬಂಡವಾಳಶಾಹಿಗಳ ಪಾಲಾಗಿದ್ದು, ಉದ್ಯಮವಾಗಿ ರೂಪಾಂತರಗೊಂಡಿವೆ. ಜನಪ್ರತಿನಿಧಿಗಳಿಂದಲೇ ನಡೆಸಲಾಗುತ್ತಿರುವ ಈ ಸಂಸ್ಥೆಗಳು ಅವರ ನಿರಂತರ ಆದಾಯದ ಮೂಲವಾಗಿವೆ ಎಂದು ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತೀಯ ವಿದ್ಯಾಭವನ ಹಾಗೂ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರಿಗೆ 2024ರ ಸಾಲಿನ ವಿ.ಕೃ. ಗೋಕಾಕ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಬ್ರಿಟಿಷರು ಭಾರತಕ್ಕೆ ಬಂದಾಗ ನಮ್ಮ ಮೇಲೆ ರಾಜಕೀಯವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಆಕ್ರಮಣ ನಡೆಸಿದರು. ಇದಕ್ಕಾಗಿ ಅವರು ಆಯ್ಕೆ ಮಾಡಿಕೊಂಡದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು. ಸ್ವಾತಂತ್ರ್ಯನಂತರ ಆ ದುರಂತದಿಂದ ಪಾರಾಗುತ್ತೇವೆ ಎನ್ನುವ ಹೊತ್ತಿನಲ್ಲಿಯೇ ಅವು ಬಂಡವಾಳಶಾಹಿಗಳ ಪಾಲಾಗಿವೆ. ಇಂತಹ ಸಂದರ್ಭದಲ್ಲಿ ಸದ್ದಿಲ್ಲದೆ ಶಿಕ್ಷಣ ಕ್ರಾಂತಿ ಮಾಡುತ್ತಿರುವ ಕರಜಗಿ ಅವರ ಮೌಲಿಕ ಚಿಂತನೆ ಉತ್ತಮ ಪರಿಕಲ್ಪನೆಯಿಂದ ಕೂಡಿದ್ದು, ಹೊಸ ಭರವಸೆ ಮೂಡಿಸಿದೆ ಎಂದರು.

ಗೋಕಾಕರಿಂದ ಕನ್ನಡ ಜಾಗೃತಿ: ನವ್ಯ ಕಾವ್ಯದ ಆದ್ಯ ಪ್ರವರ್ತಕರೆನಿಸಿದ ವಿ.ಕೃ. ಗೋಕಾಕ್, ಕನ್ನಡ ಭಾಷೆಗೆ ನೀಡಿದ ಕೊಡುಗೆ ಅನನ್ಯ. ಕನ್ನಡ ಭಾಷೆಯ ಜಾಗೃತಿ ಅವರಿಂದಲೇ ಆಗಿದ್ದು, ಆ ಆಂದೋಲನದ ಕಾವನ್ನು ಅನುಭವಿಸಿದ ನಮಗೆ ಶಿಕ್ಷಣ ನೀತಿ ಜಾರಿಗೆ ತರುವ ಅವಕಾಶ ದೊರೆಯಿತು ಎಂದು ಮಾಜಿ ಸಿಎಂ ಎಂ. ವೀರಪ್ಪ ಮೊಯಿಲಿ ಸ್ಮರಿಸಿದರು.

ನಮ್ಮ ಸಾಹಿತಿಗಳಲ್ಲಿ ಋಷಿ ಪರಂಪರೆ ಇದೆ. ಕುವೆಂಪು, ಬೇಂದ್ರೆ, ಗೋಕಾಕರು ಆ ಪರಂಪರೆಗೆ ಸೇರುತ್ತಾರೆ. ಆ ಕೊಂಡಿ ಕಳಚಿ ಹೋಗದಂತೆ ಕನ್ನಡ ವಾಙ್ಮಯ ಜಗತ್ತು ಎಚ್ಚರದಿಂದ ಇರಬೇಕಾಗುತ್ತದೆ. ಆಗ ಮಾತ್ರ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಹೇಳಿದರು.

ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್, ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ. ರಾವ್, ಟ್ರಸ್ ಗೌರವ ಅಧ್ಯಕ್ಷ ಅನಿಲ್ ಗೋಕಾಕ್, ಕಾರ್ಯದರ್ಶಿ ನ. ರವಿಕುಮಾರ್ ಇತರರಿದ್ದರು.

ಕೋಟ್:                                                                                                                                                                          ಪ್ರಸ್ತುತ ಸಾಂಸ್ಕೃತಿಕ ಟ್ರಸ್ಟ್‌ಗಳಿಗೆ ಆರ್ಥಿಕ ಬಲ ಇಲ್ಲದಂತಾಗಿದೆ. ಸರ್ಕಾರ ಸಂಗ್ರಹಿಸುವ ಗ್ರಂಥಾಲಯ ಕರ ₹500 ಕೋಟಿ. ಆದರೆ, ಆ ಹಣವನ್ನು ಗ್ರಂಥಾಲಯಗಳಿಗೆ ಪುಸ್ತಕಗಳ ಖರೀದಿಗೆ ನೀಡದೆ, ಇತರ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ಸರ್ಕಾರದ ಗಮನ ಮತ್ತು ಆಸಕ್ತಿ ಬೇರೆ ಕಡೆಯೇ ಇದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮುಂದೆ ಬಂದು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದೆ.                                             -ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ 

ಕೋಟ್:

ಗೋಕಾಕ್ ಅವರು ಆಕಾರ ಮತ್ತು ಸಾಧನೆಯಿಂದ ಎತ್ತರದ ಸ್ಥಾನದಲ್ಲಿದ್ದಾರೆ. ಜೀವನದಲ್ಲಿ ಅವರ ಒಡನಾಟ ಹೊಂದಿದ್ದೇ ನನ್ನ ಭಾಗ್ಯ. ಅವರ ಹೆಸರಿನ ಪ್ರಶಸ್ತಿ ಪಡೆದಿರುವುದು ಸಂತೋಷ ಹಾಗೂ ಕೃತಜ್ಞತಾ ಭಾವ ಮೂಡಿಸಿದೆ. ಭವಿಷ್ಯದಲ್ಲಿ ಒಳ್ಳೆಯ ಮೇಷ್ಟ್ರು ಸಿಗುವುದು ಕಷ್ಟ. ಹೀಗಾಗಿ ಇನ್ನೊಂದು ಜನ್ಮವಿದ್ದರೂ, ನಾನು ಮೇಷ್ಟ್ರು ಆಗಿಯೇ ಕೆಲಸ ಮಾಡಲು ಬಯಸುವೆ.

- ಡಾ. ಗುರುರಾಜ ಕರಜಗಿ, ಶಿಕ್ಷಣ ತಜ್ಞ