ಜಿಲ್ಲೆ

3 ದಿನ ಸಿಬಿಐ ವಶಕ್ಕೆ ವಿನಯ ಕುಲಕರ್ಣಿ

Dharwad

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಗೆ 3 ದಿನಗಳ ಕಾಲ ಸಿಬಿಐ ಕಸ್ಟಡಿ ವಿಧಿಸಿ ಧಾರವಾಡ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ಸಂಜೆ ಆದೇಶಿಸಿದೆ.

ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿನಯ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಗುರುವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು.

ವಿನಯ ಕುಲಕರ್ಣಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಡೆಯಿತು. ಸಿಬಿಐ ಪರ ವಾದ ಮಂಡಿಸಿದ ನ್ಯಾಯವಾದಿ ಸುದರ್ಶನ ಅವರು, ಆರೋಪಿಯ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಆದ್ದರಿಂದ 3 ದಿನಗಳ ಕಾಲ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ಸಿಬಿಐ ಅರ್ಜಿಗೆ ವಿನಯ ಕುಲಕರ್ಣಿ ಪರ ವಕೀಲ ಬಾಹುಬಲಿ ದನವಾಡೆ ತಕರಾರು ಅರ್ಜಿ ಸಲ್ಲಿಸಿದ್ದರು. ಈಗಾಗಲೇ ವಿನಯ ಸುಮಾರು 10 ಗಂಟೆ ವಿಚಾರಣೆಗೊಳಪಟ್ಟಿದ್ದಾರೆ. ತನಿಖೆಗೆ ಸಹಕಾರ ನೀಡಿದ್ದಾರೆ. ಪ್ರಕರಣದ ಎಫ್​ಐಆರ್ ಅಥವಾ ಚಾರ್ಜ್​ಶೀಟ್​ನಲ್ಲಿ ಅವರ ಹೆಸರಿಲ್ಲ. ಹೀಗಾಗಿ ಕಸ್ಟಡಿ ಬದಲಿಗೆ ನ್ಯಾಯಾಂಗ ಬಂಧನದಲ್ಲೇ ವಿಚಾರಣೆ ನಡೆಸಬಹುದು ಎಂದು ಕೇಳಿಕೊಂಡರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶ ಎಂ. ಪಂಚಾಕ್ಷರಿ ಅವರು, ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿದ್ದರು.

ಮಧ್ಯಾಹ್ನ 3.30ರ ಸುಮಾರಿಗೆ ಪುನಃ ಪ್ರಕರಣವು ನ್ಯಾಯಾಧೀಶರ ಎದುರು ಬಂದಿತು. ಸಂಜೆ 5.40ಕ್ಕೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಕೆಲ ಷರತ್ತುಗಳನ್ನು ವಿಧಿಸಿ, 3 ದಿನ ಕಸ್ಟಡಿಗೆ ಪಡೆಯುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚಿಸಿದರು. ದಿನಕ್ಕೆ 15 ನಿಮಿಷ ಸಿಬಿಐ ಅಧಿಕಾರಿಗಳ ಸಮ್ಮುಖದಲ್ಲಿ ಕುಟುಂಬದವರ ಮತ್ತು ವಕೀಲರ ಭೇಟಿಗೆ ಅವಕಾಶ ನೀಡಬೇಕು. ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಅವಕಾಶ ನೀಡಬೇಕು. ಆರೋಪಿಯನ್ನು ನ. 9ರಂದು ಬೆಳಗ್ಗೆ 11ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಹಲವು ಸೆಕ್ಷನ್​ನಡಿ ಪ್ರಕರಣ: ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮೇಲೆ ಸಿಬಿಐ ಅಧಿಕಾರಿಗಳು ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಕೊಲೆಗೆ ಸಂಚು ರೂಪಿಸಿರುವ ಆರೋಪದಲ್ಲಿ ವಿನಯ ಕುಲಕರ್ಣಿ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಮ್ಮ ಅರೆಸ್ಟ್ ಮೆಮೊದಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ. ಗುರುವಾರ ಬೆಳಗ್ಗೆಯೇ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರೂ, ಮಧ್ಯಾಹ್ನ 3 ಗಂಟೆವರೆಗೆ ವಿಚಾರಣೆ ನಡೆಸಿ ಬಳಿಕ ಬಂಧನ ಮಾಡಿರುವುದಾಗಿ ಹೇಳಿದ್ದಾರೆ. ಐಪಿಸಿ 302,143,147,148,120(ಬಿ) ಸೆಕ್ಷನ್​ಗಳ ಅಡಿ ಕೇಸ್ ದಾಖಲಿಸಲಾಗಿದೆ. ಕೊಲೆ, ಆಸ್ತಿ ವಿವಾದದಲ್ಲಿ ಒಳಸಂಚು, ಸಮಾಜದಲ್ಲಿ ಆತಂಕ ಸೃಷ್ಟಿ ಮಾಡುವುದು ಸೇರಿ ಇತರೆ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿದೆ ಎಂದು ಸ್ಪಷ್ಟವಾಗಿ ನಮೂದಿಸಿದ್ದಾರೆ.

ಮತ್ತೊಂದು ರಾತ್ರಿ ಜೈಲಿನಲ್ಲಿ...

ಧಾರವಾಡ: ವಿನಯ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದರೂ ಶುಕ್ರವಾರ ರಾತ್ರಿಯೇ ವಶಕ್ಕೆ ಪಡೆಯಲು ತನಿಖಾಧಿಕಾರಿಗಳು ಮುಂದಾಗಲಿಲ್ಲ. ನ್ಯಾಯಾಲಯದ ಆದೇಶ ಪತ್ರದ ಪ್ರತಿ ಹಿಡಿದು ಸಿಬಿಐ ಅಧಿಕಾರಿಗಳು ಬೆಳಗಾವಿಯ ಹಿಂಡಲಗಾ ಜೈಲಿಗೆ ಹೋಗಿ ಕೂಡಲೆ ವಶಕ್ಕೆ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೆಲ ನಿಯಮಗಳು ಅಡ್ಡಿಯಾಗಿದ್ದರಿಂದ ಶನಿವಾರ ಬೆಳಗ್ಗೆ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ, ಕುಲಕರ್ಣಿ ಮತ್ತೊಂದು ರಾತ್ರಿಯನ್ನು ಹಿಂಡಲಗಾ ಜೈಲಿನಲ್ಲಿ ಕಳೆಯುವಂತಾಯಿತು.

ಠಾಣೆ ಎದುರಲ್ಲೇ ವಿಚಾರಣೆ: ವಿನಯ ಕುಲಕರ್ಣಿಯ ಮಾವ ಚಂದ್ರಶೇಖರ ಇಂಡಿ ಹಾಗೂ ಮಾಜಿ ಆಪ್ತ ಸಹಾಯಕ ಸೋಮು ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ಸಂಜೆ ಇಲ್ಲಿಯ ಉಪನಗರ ಠಾಣೆ ಎದುರಿನಲ್ಲೇ ಕೆಲಹೊತ್ತು ವಿಚಾರಣೆ ನಡೆಸಿದರು. ಠಾಣೆ ಎದುರು ಕುರ್ಚಿ ಹಾಕಿಕೊಂಡು ಉಭಯ ಕುಶಲೋಪರಿಯ ರೀತಿಯಲ್ಲಿ ಯಾವುದೇ ಒತ್ತಡವಿಲ್ಲದವರಂತೆ ವಿಚಾರಣೆ ನಡೆಸಿದರು. ಬಳಿಕ ಇಬ್ಬರನ್ನೂ ಬಿಟ್ಟು ಕಳುಹಿಸಿದರು. ಶನಿವಾರ ಮತ್ತೆ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿದ್ದು ಎದ್ದು ಗೆದ್ದು ಬರುವೆನು...!

ಸಿಬಿಐ ತೆಕ್ಕೆಗೆ ಸಿಲುಕಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಮಾಡಲಾದ ಪೋಸ್ಟ್ ವೈರಲ್ ಆಗಿದೆ. ಬಿದ್ದು ಎದ್ದು ಗೆದ್ದು ಬರುವೆನು, ಸತ್ಯದ ತಳಹದಿಯಿಂದ ಎದ್ದು ಗೆದ್ದು ಬರುವೆನು, ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ. ಆದರೆ, ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೇ ಹೋಗುತ್ತದೆ. ಸತ್ಯಕ್ಕೆ ಸೋಲಿಲ್ಲ. ನನ್ನೆಲ್ಲ ಪ್ರೀತಿ ಪಾತ್ರರಿಗೆ ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಚಿರಋಣಿ, ನಿಮ್ಮೆಲ್ಲರ ಹಾರೈಕೆ ಹಾಗೂ ನಂಬಿಕೆ ಎಂದೂ ಸುಳ್ಳಾಗುವುದಿಲ್ಲ. ಇಂತಿ ನಿಮ್ಮ... ವಿನಯ ಕುಲಕರ್ಣಿ ಎಂದು ಬರೆಯಲಾಗಿದೆ. ವಿನಯ ಅವರ ಖಾತೆಯಿಂದ ಮಾಡಲಾದ ಈ ಟ್ವೀಟ್, ಬೆಂಬಲಿಗರಲ್ಲಿ ಹುಮ್ಮಸ್ಸು ಮೂಡಿಸಿದೆ.

2ನೇ ದಿನವೂ ಮುಂದುವರಿದ ವಿಚಾರಣೆ

ಧಾರವಾಡ: ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಸತತ 2ನೇ ದಿನವೂ ಹಲವರನ್ನು ವಿಚಾರಣೆಗೆ ಒಳಪಡಿಸಿದರು. ಗುರುವಾರ ಇಡೀ ದಿನ ವಿಚಾರಣೆಗೊಳಪಟ್ಟಿದ್ದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಶುಕ್ರವಾರವೂ ಸಿಬಿಐ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ಹುಬ್ಬಳ್ಳಿ ಪ್ರಗತಿ ಕಾಲನಿ ನಿವಾಸದಿಂದ ಇಲ್ಲಿನ ಉಪನಗರ ಪೊಲೀಸ್ ಠಾಣೆಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ವಿಜಯ ಕುಲಕರ್ಣಿ ಹಾಜರಾದರು. ಸುಮಾರು 2 ಗಂಟೆ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

ಇದಾದ ನಂತರ ವಿನಯ ಕುಲಕರ್ಣಿ ಸಂಬಂಧಿ, ವಿಜಯಪುರದ ಚಂದ್ರಶೇಖರ ಇಂಡಿ ಹಾಗೂ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಶೇಖರ ನ್ಯಾಮಗೌಡ ಅವರನ್ನು ಕೆಲ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು. ಊಟದ ಬಿಡುವು ನೀಡಿ ಮಧ್ಯಾಹ್ನ 2.45ರ ಸುಮಾರಿಗೆ ಮತ್ತೆ ಕರೆಸಿ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿ ಕಳುಹಿಸಲಾಯಿತು.

ಠಾಣೆ ಸುತ್ತ ಬ್ಯಾರಿಕೇಡ್

ಗುರುವಾರ ವಿನಯ ಕುಲಕರ್ಣಿ ಹಾಗೂ ವಿಜಯ, ಇತರರನ್ನು ಉಪನಗರ ಠಾಣೆಗೆ ಕರೆಸಿ ಇಡೀ ದಿನ ವಿಚಾರಣೆ ನಡೆಸಲಾಗಿತ್ತು. ವಿಷಯ ತಿಳಿದು ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು, ಬೆಂಬಲಿಗರು ಜಮಾಯಿಸಿದ್ದರು. ವಿನಯ ಬಂಧನ ರಾಜಕೀಯ ಪ್ರೇರಿತ ಎಂದು ಆರೋಪಿಸಿ ಕಾರ್ಯಕರ್ತರು ಕೂಗಾಡಿ ಪ್ರತಿಭಟಿಸಿದ್ದರು. ಇದರಿಂದ ನೂಕುನುಗ್ಗಲು ಉಂಟಾಗಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಉಪನಗರ ಠಾಣೆ ಪ್ರವೇಶ ದ್ವಾರಕ್ಕೆ ಬ್ಯಾರಿಕೇಡ್​ಗಳನ್ನು ಅಳವಡಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಜನ್ಮದಿನದ ಸಂಭ್ರಮಕ್ಕೆ ಶಾಕ್

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಜನ್ಮದಿನ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರಿಗೆ ಶಾಕ್ ನೀಡಿದಂತಾಗಿದೆ. ನ. 7ರಂದು 54ನೇ ಜನ್ಮದಿನಾಚರಣೆಯ ತಯಾರಿಯಲ್ಲಿದ್ದ ಕಾರ್ಯಕರ್ತರಿಗೆ, ತಮ್ಮ ನಾಯಕನನ್ನು ಸಿಬಿಐ ಕಸ್ಟಡಿಗೆ ವಹಿಸಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

ವಿನಯ ಕುಲಕರ್ಣಿ ಅಭಿಮಾನಿ ಬಳಗದಿಂದ ಜನ್ಮದಿನ ಆಚರಣೆಗಾಗಿ ಹಲವು ದಿನಗಳಿಂದ ತಯಾರಿ ನಡೆಸಲಾಗುತ್ತಿತ್ತು. ಧಾರವಾಡ 71, 74 ಮತಕ್ಷೇತ್ರದ ಯುವ ಘಟಕ, ಮಹಿಳಾ ಘಟಕ ಸೇರಿದಂತೆ ಕಾರ್ಯಕರ್ತರು ಈಗಾಗಲೇ ನಗರದ ವಿವಿಧೆಡೆ ಬ್ಯಾನರ್ ಅಳವಡಿಸಿದ್ದಾರೆ. ಅಲ್ಲದೆ ಕರೊನಾ ಹಿನ್ನೆಲೆಯಲ್ಲಿ ಅವರ ಮನೆಯಲ್ಲೇ ಜನ್ಮದಿನ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಕಾರ್ಯಕರ್ತರು ಹಾಗೂ ಬೆಂಬಲಿಗರ ಆಸೆಗೆ ಕೊಲೆ ಪ್ರಕರಣ ತಣ್ಣೀರೆರಚಿದೆ.

ರಕ್ತದಾನ, ಅನ್ನಸಂತರ್ಪಣೆ: ವಿನಯ ಕುಲಕರ್ಣಿ ಅಭಿಮಾನಿ ಬಳಗದಿಂದ ಜನ್ಮದಿನ ಪ್ರಯುಕ್ತ ಪ್ರತಿವರ್ಷ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಗಾಂಧಿ ಚೌಕ್​ನಲ್ಲಿ ಅನ್ನ ಸಂತರ್ಪಣೆ, ಜಾಧವ ಲಯನ್ಸ್ ಹೆಲ್ತ್ ಕ್ಲಬ್ ಮತ್ತು ಫಿಟ್​ನೆಸ್ ಸೆಂಟರ್​ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಇದೇವೇಳೆ ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಗುವುದು.

ಸ್ವಾಭಿಮಾನಿ ದಿನ ಇಂದು: ಸರ್ವ ಸಮಾಜಗಳ ಸ್ವಾಭಿಮಾನಿ ಬಳಗದಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಜನ್ಮದಿನವನ್ನು ನ. 7ರಂದು ಸಂಜೆ 4ಕ್ಕೆ ನಗರದ ಶ್ರೀ ಮುರುಘಾಮಠ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ. ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ವಿನಯ ಜನ್ಮದಿನವನ್ನು ಸ್ವಾಭಿಮಾನಿ ದಿನವನ್ನಾಗಿ ಆಚರಿಸಲಾಗುವುದು. ನಾಯಕರಿಗೆ ಆಗಿರುವ ಅನ್ಯಾಯವನ್ನು ಸಂಘಟನಾತ್ಮಕವಾಗಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಸಂದೇಶವನ್ನು ಅಭಿವ್ಯಕ್ತಿಗೊಳಿಸಲಾಗುವುದು. ಸಾನ್ನಿಧ್ಯವನ್ನು ಮುರುಘಾಮಠದ ಪೀಠಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ವಹಿಸುವರು. ವಿವಿಧ ಮಠಾಧೀಶರು ಪಾಲ್ಗೊಳ್ಳುವರು ಎಂದು ಹಂಪ್ಪಣವರ ತಿಳಿಸಿದ್ದಾರೆ.