ಜಿಲ್ಲೆ

ವಿಮುಕ್ತ ದೇವದಾಸಿಗರಿಗೆ ಸೌಕರ್ಯ ನೀಡಿ : ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಜಿಲ್ಲಾ ಸಂಘ ಆಗ್ರಹ

ರಾಯಚೂರು : ವಿಮುಕ್ತ ದೇವದಾಸಿಯರ ಸಹಾಯಧನ 5 ಸಾವಿರ ರೂ.ಗೆ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಜಿಲ್ಲಾ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿ, ಡಿಸಿ ಆರ್.ವೆಂಕಟೇಶ ಕುಮಾರಗೆ ಮನವಿ ಸಲ್ಲಿಸಿದರು.

ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ಸಹಾಯದ ಧನ ವಿಸ್ತರಿಸಬೇಕು, ಗಣತಿಯಿಂದ ಬಿಟ್ಟು ಹೋದ ಮಹಿಳೆಯರನ್ನು ಸೇರ್ಪಡೆ ಮಾಡಿ ಸೌಕರ್ಯ ಒದಗಿಸಬೇಕು, ಮದುವೆಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು, ಬರ ಹಾಗೂ ಅತಿವೃಷ್ಟಿ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಎಲ್ಲ ವಿಮುಕ್ತ ದೇವದಾಸಿಯರು ಮತ್ತು ಅವರ ಮಕ್ಕಳ ಹಾಗೂ ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು, ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವವರಿಗೆ ತಲಾ 5 ಎಕರೆ ಉಚಿತ ಜಮೀನು, ಸ್ವಯಂ ಉದ್ಯೋಗ ಕೈಗೊಳ್ಳಲು ವೃತ್ತಿ ತರಬೇತಿ ಶಿಬಿರಗಳನ್ನು ಆಯೋಜಿಸಬೇಕೆಂದು ಒತ್ತಾಯಿಸಿದರು.

ದೇವದಾಸಿ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷೆ ಟಿ.ವಿ.ರೇಣುಕಮ್ಮ, ಪ್ರ.ಕಾರ್ಯದರ್ಶಿ ಬಿ.ಮಾಳಮ್ಮ, ಗೌರವಾಧ್ಯಕ್ಷ ಯು. ಬಸವರಾಜ, ಉಪಾಧ್ಯಕ್ಷ ಜಿ.ನಾಗರಾಜ, ಎಚ್.ಪದ್ಮಾ, ಕೆ.ನಾಗರತ್ನ, ಎ.ಸ್ವಾಮಿ, ಕೆ.ಜಿ.ವೀರೇಶ ಇತರರಿದ್ದರು.