ಜಿಲ್ಲೆ

ಗ್ರಾಪಂಗಳು ಗ್ರಾಮೀಣ ಜನರ ಅಭಿವೃದ್ಧಿಯ ಶಕ್ತಿ ಕೇಂದ್ರಗಳು

ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ಅವರ ಗ್ರಾಮ ರಾಜ್ಯದ ಕನಸು ಸಾಕಾರಗೊಳ್ಳುವಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಪೂರಕವಾಗಿದೆ. ಗ್ರಾಮ ಪಂಚಾಯಿತಿಗಳು ಗ್ರಾಮೀಣ ಜನರ ಸರ್ವತೋಮುಖ ಅಭಿವೃದ್ಧಿಯ ಶಕ್ತಿ ಕೇಂದ್ರಗಳಾಗಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಬುಧವಾರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಜಿಪಂ ಗದಗ, ತಾಪಂ ಲಕ್ಷ್ಮೇಶ್ವರ ಹಾಗೂ ಗ್ರಾ.ಪಂ. ದೊಡ್ಡೂರ ಸಹಯೋಗದಲ್ಲಿ 2024-25 ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 20 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ದೊಡ್ಡೂರ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮೀಣ ಆಶೋತ್ತರಗಳನ್ನು ಈಡೇರಿಸುವಲ್ಲಿ ಗ್ರಾಪಂ ಪಾತ್ರ ಮಹತ್ವದ್ದಾಗಿವೆ. ಕ್ಷೇತ್ರದಲ್ಲಿನ ಗ್ರಾಮ ಪಂಚಾಯಿತಿಗಳು ಸ್ವಂತ ಕಟ್ಟಡ ಹೊಂದಬೇಕಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ಕಾರಣಾಂತರಗಳಿಂದ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ, ಗೋವನಾಳ ಸೇರಿ ಕೆಲ ಕಡೆ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳು ಗಮನ ಹರಿಸಬೇಕು. ಜನರ ಬೇಡಿಕೆಯಂತೆ ಆದಷ್ಟು ಬೇಗ ಗ್ರಾಮದ ಹತ್ತಿರದ ಸೇತುವೆ, ದೊಡ್ಡೂರ- ಬೆಳ್ಳಟ್ಟಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.

ಹೂವಿನಶಿಗ್ಲಿ ವೀರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮೀಜಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ತಹಸೀಲ್ದಾರ್ ವಾಸುದೇವ ಸ್ವಾಮಿ, ತಾಪಂ ಇಓ ಕೃಷ್ಣಪ್ಪ ಧರ್ಮರ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಈಳಗೇರ, ಉಪಾಧ್ಯಕ್ಷೆ ಸುಶೀಲಾ ಲಮಾಣಿ, ಟೊಪಣ್ಣ ಲಮಾಣಿ, ಬಿ.ಎಸ್. ಈಳಗೇರ, ಪುಂಡಲೀಕ ಲಮಾಣಿ, ಜಗದೀಶ್ ಈಳಗೇರ, ಅಮರಪ್ಪ ಗುಡಗುಂಟಿ, ಪಿಡಿಒ ಎಸ್.ಎಫ್. ಮಾಳವಾಡ, ಗ್ರಾಪಂ ಕಾರ್ಯದರ್ಶಿ ಗುರುವಿನ ಸೇರಿ ಗ್ರಾಪಂ ಸದಸ್ಯರು, ಸಿಬ್ಬಂದಿ ಇದ್ದರು. ಪಿಡಿಒ ಎಸ್.ಎಫ್. ಮಾಳವಾಡ ನಿರೂಪಿಸಿದರು.