ಜಿಲ್ಲೆ

ಸರ್ಕಾರಿ ಕಾಲೇಜು ಮಂಜೂರಿಗೆ ಒತ್ತಾಯ

ಜಗಳೂರು: ತಾಲೂಕಿನ ಸೊಕ್ಕೆಯಲ್ಲಿ ಹೊಸದಾಗಿ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿ ಮಂಗಳವಾರ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸೊಕ್ಕೆ ಗ್ರಾಮದಿಂದ ಗ್ರಾಪಂ ಅಧ್ಯಕ್ಷ, ಎಸ್‌ಡಿಎಂಸಿ ಅಧ್ಯಕ್ಷ ಸೇರಿದಂತೆ ನೂರಾರು ಗ್ರಾಮಸ್ಥರು ಜಗಳೂರು ಶಾಸಕರ ನಿವಾಸಕ್ಕೆ ಆಗಮಿಸಿ ಶಾಸಕರಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಹೋಬಳಿ ಮತ್ತು ಗ್ರಾಪಂ ಕೇಂದ್ರ ಸ್ಥಾನವಾದ ಸೊಕ್ಕೆಯಲ್ಲಿ ಸುಮಾರು 7,627 ಜನಸಂಖ್ಯೆ ಇದೆ. ಹೋಬಳಿ ವ್ಯಾಪ್ತಿಯಲ್ಲಿ ಯರಲಕಟ್ಟೆ, ಚಿಕ್ಕಬಂಟನಹಳ್ಳಿ, ಗೋಪಾಲಪುರ ಗೌರಿಪುರ ಸೇರಿದಂತೆ ಹತ್ತಾರೂ ಗ್ರಾಮಗಳು ಹೊಂದಿಕೊಂಡಿವೆ. ಸುತ್ತಮುತ್ತಲಿನ ಹಳ್ಳಿಗಳಿಗೆ ಕೇಂದ್ರವಾಗಿದ್ದರೂ ಸರ್ಕಾರಿ ಪದವಿಪೂರ್ವ ಕಾಲೇಜು ಇಲ್ಲದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆಯಾಗುತ್ತಿದೆ ಎಂದರು.

ಸೊಕ್ಕೆಯಿಂದ ಜಗಳೂರು ಪಟ್ಟಣಕ್ಕೆ 25 ಕಿ.ಮೀ ದೂರವಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ. ನಿತ್ಯ ಜಗಳೂರು, ದಾವಣಗೆರೆ ಹಾಗೂ ಕೊಟ್ಟೂರು ಕಾಲೇಜಿಗೆ ಓಡಾಡಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಆದ್ದರಿಂದ ಇಲ್ಲಿಯೇ ಹೊಸ ಕಾಲೇಜು ಪ್ರಾರಂಭವಾದರೆ ಎಲ್ಲರಿಗೂ ಅನುಕೂಲ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ತಿರುಮಲ, ಗ್ರಾಪಂ ಸದಸ್ಯ ಪಾಪಣ್ಣ, ಮುಖಂಡರಾದ ದೇವಿಕರೆ ಸುರೇಶ್, ಲೋಕಣ್ಣ, ರಾಜಪ್ಪ, ಮಾರಣ್ಣ, ಡಿ.ಸಿ. ಹನುಮಂತಪ್ಪ, ಟಿಪ್ಪುಸಾಬ್, ಹಳ್ಳೆಪ್ಪ, ಶೇಖರಪ್ಪ, ಭರಮಪ್ಪ, ಚನ್ನಬಸಪ್ಪ, ನಾಗರಾಜ್, ನಿವೃತ್ತ ಅಧಿಕಾರಿ ರಾಜುಸಾಬ್ ಮತ್ತಿತರರಿದ್ದರು.

ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅಕ್ಷರ ಜ್ಞಾನಬೇಕು. ಹಾಗಾಗಿ, ಇಡೀ ಗ್ರಾಮವೇ ಹೋರಾಟಕ್ಕೆ ಮುಂದಾಗಿದೆ. ಕಾಲೇಜು ಮಂಜೂರು ಮಾಡುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ.
ಹನುಮೇಶ್, ಅಧ್ಯಕ್ಷರು, ಎಸ್‌ಡಿಎಂಸಿ ಸೊಕ್ಕೆ.


ಸೊಕ್ಕೆಯಲ್ಲಿ ಕಾಲೇಜು ಮಂಜೂರಾತಿ ಮಾಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದರ ಬಗ್ಗೆ ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸೆ.21ರಂದು ಸಿರಿಗೆರೆಗೆ ಶಿಕ್ಷಣ ಸಚಿವರು ಆಗಮಿಸಲಿದ್ದು, ಅವರ ಗಮನಕ್ಕೆ ತಂದು ಸರ್ಕಾರ ಮಟ್ಟದಲ್ಲಿ ಮಂಜೂರು ಮಾಡಿಸುವ ಪ್ರಯತ್ನ ಮಾಡುತ್ತೇನೆ.
ಬಿ. ದೇವೇಂದ್ರಪ್ಪ, ಶಾಸಕ.