ಜಿಲ್ಲೆ

ಕತ್ತಲಲ್ಲಿ ಕಾಲದೂಡುವ ಗ್ರಾಮಸ್ಥರು

ಪ್ರಸಿನ್ ಕೆ.ಆರ್

ಬಿ.ಎಲ್.ಲಕ್ಷ್ಮಣ್ ಬೇಲೂರು

ಲಿಂಗಾಪುರ-ಅರೇಹಳ್ಳಿಯಲ್ಲಿ ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬ ಧರೆಗುರುಳುವುದು, ಕಂಬಗಳ ಮೇಲೆ ಗಿಡ ಗಂಟಿ ಬೆಳೆದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ವಿದ್ಯುತ್ ವ್ಯತ್ಯಯದಿಂದಾಗಿ ಗ್ರಾಮಸ್ಥರು ಕತ್ತಲಲ್ಲಿ ದಿನ ಕಳೆಯುವಂತಾಗಿದ್ದು, ಸೆಸ್ಕ್ ಅಧಿಕಾರಿಗಳು ಗಮನ ಹರಿಸಿ ವಿದ್ಯುತ್ ಕಂಬಗಳ ಮೇಲಿನ ಗಿಡ ಗಂಟಿಗಳನ್ನು ತೆರವುಗೊಳಿಸಿ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಲೂಕಿನ ಅರೇಹಳ್ಳಿ ಹೋಬಳಿಯ ಲಿಂಗಾಪುರ-ಅರೇಹಳ್ಳಿ-ಕಡೇಗರ್ಜೆ-ಮಲಸಾವರ-ಅನುಘಟ್ಟ ಸೇರಿದಂತೆ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಗಾಲದಲ್ಲಿ ಗಾಳಿ ಮಳೆಗೆ ಸಿಲುಕಿ ಕಂಬಗಳು ನೆಲಕ್ಕುರುಳುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಗ್ರಾಮಸ್ಥರು ದಿನನಿತ್ಯ ಪರದಾಡುವಂತಾಗಿದೆ.

ಈ ಭಾಗದಲ್ಲಿ ಕಾಡಾನೆಗಳ ಉಪಟಳ ಸಹ ಹೆಚ್ಚಾಗಿದೆ. ಆದರೆ, ವಿದ್ಯುತ್ ಸಂಪರ್ಕ ಇಲ್ಲದ ಸಂದರ್ಭ ರಾತ್ರಿ ಸಮಯದಲ್ಲಿ ಮನೆಯಿಂದ ಹೊರ ಬರುವುದಕ್ಕೂ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳು ಎಲ್ಲಿ ಯಾವಾಗ ಕಾಣಿಸಿಕೊಳ್ಳುತ್ತವೆ ಎಂಬ ಜೀವ ಭಯದಲ್ಲೆ ಓಡಾಡುವ ಸನ್ನಿವೇಶ ನಿರ್ಮಾಣವಾಗಿದೆ. ಜತೆಗೆ ಮಳೆಗಾಲದ ಸಂದರ್ಭದಲ್ಲಿ ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳಿಗೆ ಹೊಂದಿಕೊಂಡು ಬೆಳೆದಿರುವ ಗಿಡಗಂಟಿಗಳ ಬಳ್ಳಿಗಳು ವಿದ್ಯುತ್ ತಂತಿಗಳಿಗೆ ತಾಗುವುದರಿಂದ ಮತ್ತು ಮರದ ಕೊಂಬೆಗಳು ತಂತಿ ಮೇಲೆ ಬೀಳುವುದರಿಂದ ಶಾರ್ಟ್ ಸರ್ಕ್ಯೂಟ್, ತಂತಿ ತುಂಡಾಗುವುದು ಅಥವಾ ವಿದ್ಯುತ್ ಪರಿವರ್ತಕ ಹಾನಿಗೊಳಗಾಗುವುದು ಸಾಮಾನ್ಯವಾಗಿದೆ.

ಈ ಸಂಬಂಧ ಜೆಇ, ಎಇ ಮತ್ತು ಲೈನ್‌ಮನ್‌ಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾಡಾನೆಗಳ ಉಪಟಳವಿರುವ ಗ್ರಾಮಗಳಲ್ಲಿ ರಾತ್ರಿ ಸಮಯ ಮನೆಯಿಂದ ಹೊರಬಾರದಂತಾಗಿದೆ. ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಮುಂದುವರಿಯುತ್ತಲೇ ಇದೆ. ಸೆಸ್ಕ್ ಸಿಬ್ಬಂದಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದೆ, ಗ್ರೌಂಡಿಂಗ್ ಆಗಿದೆ, ಶಾರ್ಟ್ ಸರ್ಕ್ಯೂಟ್ ಆಗಿದೆ, ಕಾಫಿ ತೋಟದ ಒಳಗೆ ತಂತಿ ತುಂಡಾಗಿ ಸಮಸ್ಯೆ ಆಗಿದೆ ಎಂಬ ಸಿದ್ಧ ಉತ್ತರ ಹಲವಾರು ವರ್ಷಗಳಿಂದ ನೀಡುತ್ತಲೇ ಬರುತ್ತಿದ್ದಾರೆ. ಅವಘಡ ಸಂಭವಿಸುವ ಮುನ್ನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು. ಆದರೆ ಸೆಸ್ಕ್ ಸಿಬ್ಬಂದಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಸಮಸ್ಯೆ ಎದುರಾದಾಗ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚೆಯೇ ಪರಿಹಾರ ಕಂಡು ಹಿಡಿದರೆ ಸಮಸ್ಯೆಗಳು ಬಾರದಂತೆ ತಡೆಗಟ್ಟಬಹುದಾಗಿದೆ.

ಆದ್ದರಿಂದ ಶಿಥಿಲಾವಸ್ಥೆ ತಲುಪಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳು, ಕಂಬಗಳಿಗೆ ಸುತ್ತಿಕೊಂಡಿರುವ ಗಿಡ ಗಂಟಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಸೆಸ್ಕ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮತ್ತು ಅರೇಹಳ್ಳಿ ಪಟ್ಟಣದಿಂದ ಲಿಂಗಾಪುರಕ್ಕೆ ಮುಖ್ಯರಸ್ತೆ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಕಂಬಗಳಿಗೆ ಗಿಡ ಗಂಟಿಗಳು, ಬಳ್ಳಿಗಳನ್ನು ಗಮನಿಸಿದರೆ ಅಲ್ಲಿನ ವಿದ್ಯುತ್ ಪರಿಕರಗಳ ದುಸ್ಥಿತಿ ಸ್ಪಷ್ಟವಾಗಿ ಗೋಚರವಾಗುತ್ತದೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅನ್ನು ಆವರಿಸಿರುವ ಗಿಡಗಂಟಿಗಳು, ಬಳ್ಳಿಗಳಿಂದ ಯಾವಾಗ ಬೇಕಾದರೂ ಅಪಘಾತ ಸಂಭವಿಸಬಹುದೆಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದ್ದು, ಆದಷ್ಟು ಶೀಘ್ರವೇ ಇವುಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಗಮನ ಹರಿಸಬೇಕಿದೆ.

ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ

ಕಳೆದ ಕೆಲ ದಿನಗಳ ಹಿಂದಷ್ಟೇ ಅರೇಹಳ್ಳಿ ಭಾಗದ ವಿವಿಧ ಗ್ರಾಮಗಳಲ್ಲಿ ಹೈವೋಲ್ಟೇಜ್‌ನಿಂದಾಗಿ ಹಲವಾರು ಮನೆಗಳ ವಿದ್ಯುತ್ ಉಪಕರಣಗಳು ಹಾನಿಗೊಂಡ ಘಟನೆ ನಡೆದಿದ್ದರಿಂದ ಗ್ರಾಮಸ್ಥರು ಸೆಸ್ಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ವಿದ್ಯುತ್ ಕಂಬ ಮತ್ತು ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಗಿಡ ಗಂಟಿಗಳ ಬಳ್ಳಿಗಳು ಹಬ್ಬಿಕೊಂಡಿರುವುದರಿಂದ ಅಪಾಯಕ್ಕೆ ಆಹ್ವಾನಿಸುತ್ತಿದೆ. ರಸ್ತೆ ಬದಿ ಓಡಾಡುವ ಜನ, ಜಾನುವಾರುಗಳಿಗೆ ವಿದ್ಯುತ್ ತಗುಲುವ ಮುನ್ನ ಅಧಿಕಾರಿಗಳು ಎಚ್ಚೆತ್ತು ದುರಸ್ತಿಗೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.