ಮಡಿಕೇರಿ: ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳುವ ಸಂದರ್ಭ ಆಯಾ ಗ್ರಾಮಸ್ಥರು ಕಾಮಗಾರಿಯ ಗುಣಮಟ್ಟದ ಬಗ್ಗೆ ನಿಗಾ ವಹಿಸಬೇಕು ಎಂದು ಡಾ.ಸುಬ್ರಮಣಿಯನ್ ಸ್ವಾಮಿರವರ ಆಪ್ತ ಹಾಗೂ ವಿಎಚ್‌ಎಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಕಿವಿಮಾತು ಹೇಳಿದರು.
ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂರುಕ್ಕನಾಡ್ ಹಿಲ್ಸ್-ಕತ್ತಲೆಕಾಡ್‌ನ ಕಾಂಕ್ರೀಟ್ ರಸ್ತೆಯನ್ನು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಕೊಡವರು ಹಾಗೂ ಕೊಡಗಿನ ಮೇಲಿನ ಅಭಿಮಾನದಿಂದ ಕೇಂದ್ರದ ಮಾಜಿ ಸಚಿವ ಹಾಗೂ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿರವರು ತಮ್ಮ ರಾಜ್ಯಸಭಾ ನಿಧಿಯಿಂದ ಅನುದಾನ ನೀಡಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪರವರ ಪ್ರಯತ್ನದ ಫಲವಾಗಿ ಇಂದು ರಸ್ತೆ ನಿರ್ಮಾಣಗೊಂಡಿದೆ. ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಹೆಚ್ಚು ಆಸಕ್ತಿ ತೋರಿ ತಮ್ಮನ್ನು ತಾವು ತೊಡಗಿಸಿಕೊಂಡ ಕಾರಣ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಿದೆ. ಯೋಜನೆಗಳು ಅನುಷ್ಠಾನಗೊಳ್ಳುವಾಗ ಆಯಾ ಗ್ರಾಮಸ್ಥರು ಕಾಮಗಾರಿಯ ಗುಣಮಟ್ಟದ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಹೆದ್ದಾರಿಗಳು ಮಾತ್ರ ಉತ್ತಮವಾಗಿದ್ದರೆ ಸಾಲದು, ಗ್ರಾಮೀಣ ರಸ್ತೆಗಳು ಕೂಡ ಉನ್ನತ ಮಟ್ಟದಲ್ಲಿರಬೇಕು ಎಂದರು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ಕೊಡಗು ಹಿಂದೆ ಕೂರ್ಗ್ ರಾಜ್ಯವಾಗಿದ್ದಾಗ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದಿಂದ ಕೂಡಿರುತ್ತಿತ್ತು. ಕರ್ನಾಟಕದೊಂದಿಗೆ ವಿಲೀನವಾಗಿ ಜಿಲ್ಲೆಯಾಗಿ ಪರಿವರ್ತನೆಯಾದ ನಂತರ ಕಮಿಷನ್ ಆಧಾರದ ಕಳಪೆ ಕಾಮಗಾರಿಗಳು ನಡೆದಿವೆ. ಆದರೆ, ನೂರುಕ್ಕನಾಡ್ ಹಿಲ್ಸ್-ಕತ್ತಲೆಕಾಡ್ ರಸ್ತೆ ಕಾಮಗಾರಿ ಯಾವುದೇ ಕಮಿಷನ್‌ಗೆ ಅವಕಾಶವಿಲ್ಲದೆ ಉತ್ತಮ ಗುಣಮಟ್ಟದಿಂದ ನಿರ್ಮಾಣಗೊಂಡಿದೆ ಎಂದರು.
ಯಾವುದೇ ಕಮಿಷನ್ ಕಾಮಗಾರಿ ಇಲ್ಲಿ ನಡೆದಿಲ್ಲ. ಗ್ರಾಮಸ್ಥರಿಗೆ ಉತ್ತಮ ರಸ್ತೆ ನಿರ್ಮಿಸಿಕೊಡುವುದು ನಮ್ಮ ಉದ್ದೇಶವಾಗಿತ್ತು. ಇದೀಗ ನಿರ್ಮಾಣಗೊಂಡಿರುವ ರಸ್ತೆ ಸುದೀರ್ಘ ಕಾಲ ಉಳಿಯಲಿದ್ದು, ಜನ ಸದುಪಯೋಗಪಡಿಸಿಕೊಳ್ಳಬೇಕು. ಗುಣಮಟ್ಟದ ರಸ್ತೆಯನ್ನು ಸಂರಕ್ಷಿಸಿಕೊಳ್ಳುವುದು ಗ್ರಾಮಸ್ಥರಾದ ನಿಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ವೀರರ ಸಂಕೇತವಾದ ಕೊಡವ ಸಾಂಪ್ರದಾಯಿಕ ಕೋವಿ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿ ರಸ್ತೆಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟಿ, ಎನ್.ಯು.ನಾಚಪ್ಪ, ರಸ್ತೆ ನಿರ್ಮಿಸಿದ ಗುತ್ತಿಗೆದಾರರಾದ ಜಯಚಂದ್ರೇಗೌಡ, ಮಾದಪ್ಪ ಹಾಗೂ ನಿಗಾ ವಹಿಸಿದ ಗ್ರಾಮದ ಪ್ರಮುಖ ಜನಾರ್ಧನರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷ ಮುತ್ತಪ್ಪ, ಸದಸ್ಯೆ ಪೊರಿಮಂಡ ತಂಗಮ್ಮ ಲೋಕೇಶ್, ಪ್ರಮುಖರಾದ ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ ಗಿರೀಶ್, ನಂದೇಟಿರ ಕವಿತ ರವಿ, ರಮಣಿ ಶೇ?ಪ್ಪ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.