ತ್ಯಾಮಗೊಂಡ್ಲು: ಕ್ವಿನ್ಸಿಟಿ ಯೋಜನೆಗಾಗಿ ಭೂಸ್ವಾಧಿನ ಮಾಡಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಬಳಗೆರೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ಆಕ್ರೋಶ ಹೊರಹಾಕಿದರು. ಬಳಗೆರೆಯ 553 ಎಕರೆ ಸ್ವಾಧಿನದ ಜಮೀನಿಗೆ ದರ ನಿಗದಿ ಮಾಡಲು ಪಟ್ಟಣದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರೆದಿದ್ದ ಸಭೆಗೂ ಮುನ್ನ ರೈತರು ಪ್ರತಿಭಟನೆ ನಡೆಸಿದರು. ರಕ್ತ ಕೊಟ್ಟೇವು ಭೂಮಿ ಕೊಡೆವು ಎಂಬ ೂಷಣೆಯೊಂದಿಗೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ವಿಶೇಷ ಭೂಸ್ವಾಧಿನ ಅಧಿಕಾರಿ ಶಿವೇಗೌಡ ಅವರ ಮನವಿಗೂ ಬಗ್ಗದೆ, ರೈತರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರ ಮತ್ತು ಅದರ ದಳ್ಳಾಳಿಯಂತೆ ಕೆಲಸ ಮಾಡುತ್ತಿರುವವರ ಆಮಿಷಗಳಿಗೆ ಬಲಿಯಾಗುವುದಿಲ್ಲ, ಬಂಗಾರದಂತಹ ಭೂಮಿ ಕೊಡಲು ತಯಾರಿಲ್ಲ ಎಂದರು. ರೈತರು ಬಿಗಿಪಟ್ಟು ಹಿಡಿದಿರುವುದನ್ನು ಮನಗೊಂಡ ವಿಶೇಷ ಭೂಸ್ವಾಧಿನ ಅಧಿಕಾರಿ ಶಿವೇಗೌಡ ರೈತರ ಬಳಿಗೆ ಬಂದು ಏನೇ ಸಮಸ್ಯೆ ಇದ್ದರೂ ಬಗೆಹರಿಸುವುದಾಗಿ ತಿಳಿಸಿ, ಸಭೆಯಲ್ಲಿ ಭಾಗವಹಿಸಲು ಕೇಳಿಕೊಂಡರು, ಕಳೆದ ಎರಡು ಗ್ರಾಮಗಳ ದರ ನಿಗದಿ ಸಭೆಯಲ್ಲಿ ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ, ಪ್ರಭಾವಿಗಳ ಜಮೀನು ಕೈಬಿಟ್ಟ ಬಗ್ಗೆ ಸಮಜಾಯಷಿ ನೀಡಿಲ್ಲ. ಆದ್ದರಿಂದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿ ರೈತರು ನಿರ್ಗಮಿಸಿದರು. ರೈತರ ಒಗ್ಗಟ್ಟಿನಿಂದ ಸಭೆ ವಿಫಲವಾಯಿತು.
ಅಧಿಕಾರಿಗಳು ವಿವರಣೆ ನೀಡಲಿ: ಜಿಲ್ಲಾ ಬಿಜೆಪಿ ಅಧ್ಯಕ್ಷ, ರೈತ ಮುಖಂಡ ಎಚ್.ರಾಮಕೃಷ್ಣಪ್ಪ ಮಾತನಾಡಿ, ದಿನಕ್ಕೆ 1200 ಲೀಟರ್ ಹಾಲು ಉತ್ಪಾದಿಸುವ, ರಾಜಧಾನಿ ಬೆಂಗಳೂರಿಗೆ ಪ್ರತಿನಿತ್ಯ ಟನ್ಗಟ್ಟಲೆ ತರಕಾರಿ, ತೆಂಗು, ಪೂರೈಸುವ ತೋಟಗಳಿರುವ ಸಮೃದ್ಧ ಭೂಮಿಯನ್ನು ಬರಡು ಭೂಮಿ ಎಂದು ತೋರಿಸಿ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ. ಭೂಸ್ವಾಧಿನವಾದರೂ ರೈತರು ಅದರ ಪರಿಹಾರದ ಹಣ ಪಡೆಯಲು ಏಳು ಜನುಮ ಸವೆಸಬೇಕು, ಶೇ.6 ಕಮಿಷನ್ ಹಣ ನೀಡಬೇಕು, ಪರಿಹಾರ ಹಣ ಬಿಡುಗಡೆಗೂ ಮುನ್ನ ರೈತರಿಂದ ಅದರ ಚೆಕ್ ಪಡೆಯುತ್ತಾರೆ. ಇದು ಏಕೆ ಎಂಬುದಕ್ಕೆ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು. ಸರ್ಕಾರದ ಪ್ರಥಮ ನೋಟಿಸ್ ಬಂದ ಕೂಡಲೇ ಕೊಡಿಗೇಹಳ್ಳಿ ಗ್ರಾಪಂ ಗ್ರಾಮಗಳ ರೈತರ ಸಭೆಗೆ ಸಂಸದ ಸುಧಾಕರ್ ಕೂಡ ಭಾಗವಹಿಸಿ ರೈತರ ಜತೆ ಇದ್ದು, ಅವರ ಎಲ್ಲ ಹೋರಾಟಕ್ಕೆ ಬೆಂಬಲ ೂಷಿಸಿದ್ದರು. ಈಗ ಮುಂದೆಯೂ ಹೋರಾಟದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು.
ನಮ್ಮ ಕಿಡ್ನಿ ಪಡೆಯಿರಿ : ಪ್ರಥಮ ನೋಟಿಸ್ ನೀಡಿದಾಗ ಇದ್ದ ಭೂಸ್ವಾಧಿನದ ಜಮೀನುಗಳ ಪೈಕಿ 2ನೇ ನೋಟಿಸ್ ನೀಡುವಾಗ ಕೈಬಿಡಲಾಗಿದೆ. ಆ ಜಮೀನು ಕೈಬಿಡಲು ಅನುಸರಿಸಿದ ಮಾರ್ಗಸೂಚಿಯನ್ನೇ ನಮ್ಮ ಜಮೀನುಗಳಿಗೂ ಅನುಸರಿಸಿ, ಕೈ ಬಿಟ್ಟ ಜಮೀನುಗಳ ಬದಲು ಎಷ್ಟು ಹಣವನ್ನು ಅಧಿಕಾರಿಗಳು ಪಡೆದಿದ್ದಾರೆ ಎಂದು ಹೇಳಬೇಕು, ನಮ್ಮ ಬಳಿ ಹಣವಿಲ್ಲ, ನಮ್ಮ ಕಿಡ್ನಿ ತೆಗೆದುಕೊಳ್ಳಿ. ಜಮೀನು ಸ್ವಾಧಿನದಿಂದ ಕೈಬಿಡಿ ಎಂದು ಬಳಗೆರೆ ರೈತ ಪ್ರಕಾಶ್, ಗ್ರಾಪಂ ಸದಸ್ಯ ನರಸಿಂಹಮೂರ್ತಿ ಒತ್ತಾಯಿಸಿದರು.
ಎಲ್ಲ ರೈತರು ಒಗ್ಗಟ್ಟಾಗಿದ್ದರೆ ಭೂ ಸ್ವಾಧಿನ ವಿರೋಧ ಹೋರಾಟ ಯಶಸ್ಸು ಕಾಣಲು ಸಾಧ್ಯ, ಈ ಹೋರಾಟಕ್ಕೆ ನೆಲಮಂಗಲ ಶಾಸಕರನ್ನು ಕರೆ ತರುವುದಕ್ಕೆ ಸಿದ್ಧ. ಸಂಸದರು ಕೂಡ ಜತೆಯಾಗಿ ಹೋರಾಟ ನಡೆಸಬೇಕು. ಅಲ್ಲಿಯವರೆಗೂ ಯಾವುದೇ ರೈತರು ಸರ್ಕಾರಕ್ಕೆ ದಾಖಲೆ ನೀಡಬಾರದು. > ವಕೀಲ ಹನುಮಂತೇಗೌಡ ಬಗರ್ಹುಕುಂ ಸಮಿತಿ ಸದಸ್ಯ