oplus_6291456 
ಜಿಲ್ಲೆ

ನಗರಸಭೆ ಸೇರ್ಪಡೆಗೆ ಗ್ರಾಮಸ್ಥರ ವಿರೋಧ

ಗಂಗಾಧರ ಬಿ ವಿ

ಮಾಯಗಾನಹಳ್ಳಿ, ಬಿಳಗುಂಬ ಗ್ರಾಪಂ ರಾಮನಗರಕ್ಕೆ ಸೇರಿಸದಂತೆ ಪಟ್ಟು

ರಾಮನಗರ

ಗ್ರೇಡ್-1 ಮಾದರಿಯಲ್ಲಿ ರಾಮನಗರ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ಮಾಯಗಾನಹಳ್ಳಿ, ಬಿಳಗುಂಬ ಗ್ರಾಪಂಗಳನ್ನು ಸೇರಿಸಿಕೊಳ್ಳುವ ಪ್ರಯತ್ನ ಚಾಲ್ತಿಯಲ್ಲಿರುವಾಗಲೇ ಇತ್ತ ಗ್ರಾಮಸ್ಥರಿಂದ ವಿರೋಧವೂ ಶುರುವಾಗಿದೆ.

ಗ್ರಾಮಗಳನ್ನು ನಗರಸಭೆಗೆ ಸೇರಿಸದಂತೆ ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು.

ಕಸಬಾ ಹೋಬಳಿ ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಮಾಯಗಾನಹಳ್ಳಿ, ಕೇತೋಹಳ್ಳಿ, ಸಂಗಬಸವನದೊಡ್ಡಿ, ಕೆಂಪನಹಳ್ಳಿ, ಬಸವನಪುರ, ಕೆಂಜಿಗರಹಳ್ಳಿ ಕೆಂಜಿಗರಹಳ್ಳಿ ಕಾಲನಿ, ಗಂಗರಾಜನಹಳ್ಳಿ, ಮಾದಾಪುರ, ಗೋಪಾಲಪುರ, ಶಿವನೇಗೌಡನದೊಡ್ಡಿ, ರಾಂಪುರದೊಡ್ಡಿ, ಅರಳಿಮರದದೊಡ್ಡಿ ಧಾರಾಪುರ, ಕಪನಯ್ಯನದೊಡ್ಡಿ ಗ್ರಾಮಾಂತರ ಪ್ರದೇಶವಾಗಿವೆ. ಈ ಗ್ರಾಮಗಳಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಿಗುತ್ತಿದ್ದು, ಈ ಗ್ರಾಮಗಳನ್ನು ಗ್ರೇಡ್-1 ನಗರಸಭೆ ಗ್ರಾಮಗಳಾಗಿ ಸೇರಿಸಿರುವುದರಿಂದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳಿಂದ ವಂಚಿತವಾಗುತ್ತವೆ ಎಂದು ಗ್ರಾಮಸ್ಥರು ತಿಳಿಸಿದರು.

ನಗರಸಭೆಗೆ ಸೇರ್ಪಡೆ ಮಾಡಿಕೊಳ್ಳುವ ಗ್ರಾಮಗಳು ವ್ಯವಸಾಯದ ಜಮೀನು ಹೊಂದಿದೆ. ಈ ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡುವುದರಿಂದ ಕೃಷಿ ಚಟುವಟಿಕೆಗಳು ಕಡಿಮೆಯಾಗಿ ರೈತರು ಕೃಷಿ ಜಮೀನು ಕಳೆದುಕೊಂಡು ದಿವಾಳಿಯಾಗುತ್ತಾರೆ. ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಾದಾಪುರ ಎಂ.ಆರ್. ಶಿವಕುಮಾರಸ್ವಾಮಿ, ಮುಖಂಡರಾದ ವಿ.ನರಸಿಂಹಮೂರ್ತಿ, ಕೇತೋಹಳ್ಳಿ ಯೋಗೇಶ್, ಕನ್ನಡಪರ ಹೋರಾಟಗಾರ ನೀಲೇಶ್‌ಗೌಡ, ಮಾಯಗಾನಹಳ್ಳಿ ರಾಜಶೇಖರ್ ವೆಂಕಟೇಶ್, ಶ್ರೀಧರ್, ವಿನಯ್, ನಾರಾಯಣ್, ಭೈರಪ್ಪ, ನಾಗರಾಜು, ಬಾಬು, ರಾಶಿ, ಸಿಂಗರಯ್ಯ, ರಾಮಕೃಷ್ಣಯ್ಯ ಇದ್ದರು.