ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾದಲ್ಲಿ ನಿರ್ಮಾಣವಾಗುತ್ತಿರುವ ಬಿಬಿಎ ಸಾಂಸ್ಕೃತಿಕ ಭವನದ ಬುನಾದಿಗೆ ಕೆರೆ ಮರಂ ಏರಿಸಲಾಗಿದ್ದು, ಟ್ಯಾಂಕರ್ ಕುಸಿದಿರುವುದು. 
ಜಿಲ್ಲೆ

ಕಳಪೆ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ

ರುದ್ರಪ್ಪ ವಾಲಿ

ಯಲಬುರ್ಗಾ: ಸುಕ್ಷೇತ್ರ ಚಿಕ್ಕವಂಕಲಕುಂಟಾ ಶ್ರೀ ಮಾರುತೇಶ್ವರ ದೇವಸ್ಥಾನ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಬುದ್ಧ, ಬಸವ, ಅಂಬೇಡ್ಕರ್ ಸಾಂಸ್ಕೃತಿಕ ಭವನದ ಕಾಮಗಾರಿ ನಡೆದಿದ್ದು, ಬುನಾದಿ ಹಂತದಲ್ಲೇ ಸಾರ್ವಜನಿಕರಿಂದ ಕಳಪೆ ಆರೋಪ ಕೇಳಿಬಂದಿದೆ.

ತಾಲೂಕು ಕೇಂದ್ರದಿಂದ ಸುಮಾರು 35 ಕಿ.ಮೀ.ದೂರದಲ್ಲಿರುವ ಚಿಕ್ಕವಂಕಲಕುಂಟಾ ಗ್ರಾಮವು ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಗೆ ಸೇರುತ್ತದೆ. ಸುಮಾರು 40 ಹಳ್ಳಿಗಳು ಒಳಪಡುತ್ತವೆ. ಚಿಕ್ಕವಂಕಲಕುಂಟಾದಲ್ಲಿ ಐತಿಹಾಸಿಕ ಮಾರುತೇಶ್ವರ ದೇವಸ್ಥಾನವಿದೆ. ಸಹಸ್ರಾರು ಭಕ್ತ ಸಮೂಹವನ್ನು ಹೊಂದಿದ ಆಂಜನೇಯ ಈ ಭಾಗದ ಆರಾಧ್ಯ ದೈವವೂ ಹೌದು.

ಯಾವುದೇ ದೊಡ್ಡ ಮಟ್ಟದ ಸಭೆ, ಸಮಾರಂಭ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮ ನಡೆಸಲು ಅನುಕೂಲವಾಗುವ ಹಿತದೃಷ್ಟಿಯಿಂದ ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 5 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಯಿಂದ 3 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಸುಸಜ್ಜಿತ ಬೃಹತ್ ಭವನ ನಿರ್ಮಾಣವಾಗುವ ವಿಚಾರ ಸುತ್ತಲಿನ ಹಳ್ಳಿಗಳಿಗೆ ಜನರಿಗೆ ಸಂತಸದ ವಿಚಾರ. ಒಟ್ಟು 8 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಬುದ್ಧ, ಬಸವ, ಅಂಬೇಡ್ಕರ್ ಸಾಂಸ್ಕೃತಿಕ ಭವನ ನಿರ್ಮಾಣದ ಕಾಮಗಾರಿ ಹೊಣೆ ಹೊತ್ತಿದೆ. ಕಾಮಗಾರಿ ಕಳಪೆ ಆರೋಪ ಭವನದ ಬುನಾದಿ ಕಾಮಗಾರಿ ಪ್ರಗತಿಯಲ್ಲಿದೆ. ಬುನಾದಿಗೆ ಗರಸು (ಮಣ್ಣು) ಹಾಕಿದರೆ ಗಟ್ಟಿಮುಟ್ಟಾಗುತ್ತದೆ. ಆದರೆ ಕಲಭಾವಿ-ಚಿಕ್ಕವಂಕಲಕುಂಟಾ ಕೆರೆಯಿಂದ ಮರಂ ತಂದು ಬುನಾದಿ ಮುಚ್ಚಲಾಗುತ್ತಿದೆ. ಇದರಿಂದ ಕಟ್ಟಡ ನಿರ್ಮಾಣ ಹಂತದಲ್ಲಿಯೇ ಕುಸಿಯುತ್ತಿದೆ. ಕೆರೆ ಮರಂ ಹಾಕುವುದರಿಂದ ಬುನಾದಿ ಗಟ್ಟಿಯಾಗುವುದಿಲ್ಲ. ಗರಸು ಮಣ್ಣು ಹಾಕಬೇಕು. ಭವನ ನಿರ್ಮಾಣಕ್ಕೆ ಕೋಟಿಗಟ್ಟಲೇ ಖರ್ಚು ಮಾಡಲಾಗುತ್ತಿದೆ. ಆದರೆ ಗುತ್ತಿಗೆದಾರರು ಕಟ್ಟಡದ ಪ್ರಾರಂಭದಲ್ಲಿದೇ ಕಳಪೆ ಮಟ್ಟದ ಕೆಲಸ ನಡೆಸಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಸುಸಜ್ಜಿತ ಭವನ ನಿರ್ಮಾಣ ಮಾಡಬೇಕು. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾಮಗಾರಿ ಗುಣಮಟ್ಟದಿಂದ ನಡೆಸಲು ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮಸ್ಥರಾದ ಹೊಳೆಗೌಡ ಗೌಡ್ರ, ಬಸವರಾಜ ತಳವಾರ್, ಕುಂಟೆಪ್ಪ ಹೂವುನೂರ, ರವಿ ಆಳೂರು ಒತ್ತಾಯಿಸಿದ್ದಾರೆ. ಚಿಕ್ಕವಂಕಲಕುಂಟಾದಲ್ಲಿ ನಿರ್ಮಾಣವಾಗುತ್ತಿರುವ ಬುದ್ಧ, ಬಸವ, ಅಂಬೇಡ್ಕರ್ ಸಾಂಸ್ಕೃತಿಕ ಭವನ ಕಾಮಗಾರಿ ಗುಣಮಟ್ಟದಿಂದ ನಡೆಸಲು ಗುತ್ತಿಗೆದಾರರಿಗೆ ನಿರ್ದೇಶಿಸಲಾಗಿದೆ. ಬುನಾದಿ ಕಾಮಗಾರಿ ಕಳಪೆ ನಡೆದಿದ್ದರೆ, ಪರಿಶೀಲಿಸಿ ಅದನ್ನು ಗುತ್ತಿಗೆದಾರರ ವೆಚ್ಚದಲ್ಲಿ ಸರಿಪಡಿಸಲಾಗುವುದು. ಬಿ.ಮಲ್ಲಿಕಾರ್ಜುನ ಎಇಇ ಲೋಕೋಪಯೋಗಿ ಇಲಾಖೆ, ಯಲಬುರ್ಗಾ.