ಎಂ.ಎಸ್.ಸಿದ್ದಲಿಂಗೇಶ್ವರ್ ಮಾಗಡಿ
ಪಟ್ಟಣದ ಸಮೀಪ ನೈರುತ್ಯ ದಿಕ್ಕಿನಲ್ಲಿರುವ ಐತಿಹಾಸಿಕ ಗ್ರಾಮವೇ ಕಲ್ಯ. ಹಿಂದೆ ಈ ಗ್ರಾಮಕ್ಕೆ ಕಲಾವತಿ ಪಟ್ಟಣವೆಂದು ಕರೆಯಲಾಗುತ್ತಿತ್ತು. ಪ್ರಾಚೀನ ಕಾಲದಲ್ಲಿ ಜೈನ ಕೇಂದ್ರವಾಗಿದ್ದ ಈ ಗ್ರಾಮ, ವಿಜಯನಗರ ಸಾಮ್ರಾಜ್ಯದ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಶ್ರೀ ಕೃಷ್ಣದೇವರಾಯರ ಆಳ್ವಿಕೆಗೂ ಮುನ್ನ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರು ಈ ಪ್ರಾಂತ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಈ ಪ್ರಾಂತ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬುಕ್ಕದೇವರಾಯ ಮಾಗಡಿಯಿಂದ ಪಶ್ಚಿಮಕ್ಕೆ ಹುತ್ರಿದುರ್ಗ ಹಾಗೂ ಬುಕ್ಕಸಾಗರ ಗ್ರಾಮದವರೆಗೂ ಆಡಳಿತ ವಿಸ್ತರಿಸಿದ್ದ. ಅಂದು ಕಲ್ಯ ಗ್ರಾಮದಲ್ಲಿ ಜೈನರು ಮತ್ತು ಶ್ರೀವೈಷ್ಣವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇವರ ನಡುವೆ ಪದೇಪದೆ ಕಲಹಗಳು ಏರ್ಪಡುತ್ತಿದ್ದು, ಪ್ರಾಣಹಾನಿಗೂ ಕಾರಣವಾಗುತ್ತಿತ್ತು. ಖುದ್ದು ಬುಕ್ಕದೇವರಾಯರೇ ಎರಡು ಸಮುದಾಯದವರನ್ನು ಸೋದರರಂತೆ ಬಾಳುವಂತೆ ಮತ್ತು ಧರ್ಮ ಕಾಪಾಡುವಂತೆ ಮಾಡಿದ್ದರು.
ಈ ಬಗ್ಗೆ ಬುಕ್ಕದೇವರಾಯ 13ನೇ ಶತಮಾನದಲ್ಲೇ ಶಾಸನವನ್ನೂ ಬರೆಸಿದ್ದಾರೆ. ಇದು ಶಾಸನವನ್ನು ಇಂದಿಗೂ ಕಲ್ಯ ಗ್ರಾಮದಲ್ಲಿ ಕಾಣಬಹುದು. ಈ ಹಿಂದೆ ತಾಪಂ ಇಒ ಆಗಿದ್ದ ಪ್ರದೀಪ್ ಅವರು ಈ ಶಾಸನವನ್ನು ಜೀರ್ಣೋದ್ದಾರಗೊಳಿಸಿ, ಇದರಲ್ಲಿರುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ.
64 ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದ ಸರ್ವಶೀಲೆ ಶಿವಶರಣೆ ಚೆನ್ನಮ್ಮ ಈ ಗ್ರಾಮದಲ್ಲಿ ವಾಸವಿದ್ದು, ಇವರ ವಿದ್ಯೆ, ಸೌಂದರ್ಯಕ್ಕೆ ಆಂಧ್ರದ ತೆಲುಗು, ಕನ್ನಡ ದ್ವಿಭಾಷಾ ಕವಿ ಪಾಲ್ಕುರಿಕೆ ಸೋಮನಾಥ ಬೆರಗಾಗಿದ್ದರು. ನಂತರ ಕಾಯಿಲೆಗೆ ತುತ್ತಾಗಿ ಮರಣಹೊಂದಿದರು. ದೇವಾಲಯದ ಎಡಬದಿಯಲ್ಲಿ ಪಾಲ್ಕುರಿಕೆ ಸೋಮನಾಥ ವಾಸವಿದ್ದು ಐಕ್ಯವಾಗಿರುವ ಗದ್ದುಗೆಯನ್ನು ಇಂದಿಗೂ ಕಾಣಬಹುದು.
ಇಲ್ಲಿರುವ ಬೆಟ್ಟದ ಕಲ್ಲೇಶ್ವರ ದೇವಾಲಯ ಕ್ರಿ.ಶ.1512ರಲ್ಲಿ ನಿರ್ಮಾಣವಾಗಿದ್ದು, ವಿಜಯನಗರ ಅರಸ ಶ್ರೀಕೃಷ್ಣದೇವರಾಯ ನೆಟ್ಟಿರುವ ಶಾಸನದಲ್ಲಿ ಕಲ್ಲೇಶ್ವರನನ್ನು ಕಲಿನಾಥ, ಕಲಿಗಣನಾಥ ಎಂದು ಕರೆದಿದ್ದಾರೆ. ಕಲ್ಲೇಶ್ವರನ ಗುಡಿಯು ನೈಸರ್ಗಿಕ ಗವಿಯಾಗಿದ್ದು ಜೈನ, ವೈಷ್ಣವ, ಶೈವ ಧರ್ಮದ ಕಾಳಿಮುಖರ ಪರ್ವತಾವಳಿ, ನಾಥ ಪರಂಪರೆ, ವೀರಶೈವ ಪರಂಪರೆಗಳಿಗೆ ಮೂಲ ಸಾಕ್ಷಿಯಾಗಿದೆ.
ದೇವಾಲಯದಲ್ಲಿ ಈಶ್ವರನ ಲಿಂಗವಿದ್ದು, ಅದರ ಮುಂದೆ ಕಲ್ಲಿನ ಬಸವಣ್ಣ ಇತ್ತು. ಇದನ್ನು ಕುಟ್ಟಿದರೆ ಕಂಚಿನ ಶಬ್ದ ಬರುತ್ತಿತ್ತು. 3 ವರ್ಷದ ಹಿಂದೆ ಇದು ನಾಪತ್ತೆಯಾಗಿದೆ. ಬೆಟ್ಟದ ಬುಡದಲ್ಲಿ ದೊಣೆಯೊಂದಿದು, ವರ್ಷಪೂರ್ತಿ ಇಲ್ಲಿ ನೀರು ಇರುತ್ತದೆ. ಇಲ್ಲಿಂದ ಶಿವಗಂಗೆವರೆಗೂ ಸುರಂಗ ಇರುವುದನ್ನು ನೋಡಬಹುದಾಗಿದೆ.
ಕಲ್ಲೇಶ್ವರ ದೇವಾಲಯ ಒಳಗೆ ಗಾಂಧಾರ ಶೈಲಿಯಲ್ಲಿದ್ದು ದ್ವಾರ ಬಾಗಿಲಿನ ಎಡಗಡೆ ಬಂಡೆಯ ಮೇಲೆ ಕೆತ್ತಿರುವ ಬರಹಗಳಿವೆ, ಹುಲಿಬೇಟೆ ವೀರಕಲ್ಲು, ನಿಶದಿ ಕಲ್ಲು ಲಿಂಗಮುದ್ರೆ ಗಡಿಕಲ್ಲು ದೇವಾಲಯಗಳು, ಜಂಗಮ ಮಠ, ಮಾನಸ್ಥಂಭ, ಶೈವ,ವೈಷ್ಣವ, ಜೈನ ಧರ್ಮಕ್ಕೆ ಸಂಬಂಧಿಸಿದ ಹಲವಾರು ಅವಶೇಷಗಳು ಸೇರಿ ಬೆಟ್ಟದಲ್ಲಿ ಸುಮಾರು 14 ಶಾಸನಗಳು ಸಿಕ್ಕಿದ್ದು, ಈ ಗ್ರಾಮದ ಇತಿಹಾಸವನ್ನು ಹೇಳುತ್ತವೆ.
ಇಲ್ಲಿರುವ ಜಂಗಮ ಮಠದಲ್ಲಿ ಹಲವು ಮಂದಿ ಐಕ್ಯವಾಗಿರುವ ಗದ್ದುಗೆಗಳಿವೆ. ಮುಂಭಾಗ ಇರುವ ನಂದಿಯ ಕಣ್ಣುಗಳು ಇಂದಿಗೂ ಹೊಳೆಯುತ್ತವೆ. ಈ ಮಠದ ನೂರಾರು ಎಕರೆ ಜಮೀನು ಒತ್ತುವರಿಯಾಗಿದ್ದು, ತೆರವುಗೊಳಿಸಲು ಸ್ಥಳೀಯ ಆಡಳಿತ ಮುಂದಾಗಬೇಕಿದೆ. ಮಠದ ಎದುರಿನ ಆಡುಗಲ್ಲು ಬಂಡೆಯ ತುದಿಗೆ ಮೇಕೆಗಳು ಹೋಗಿ ಮರಿಗಳಿಗೆ ಜನ್ಮನೀಡಿವೆ. ಅದಕ್ಕಾಗಿ ಇದಕ್ಕೆ ಆಡುಗಲ್ಲು ಬಂಡೆ ಎಂಬ ಹೆಸರಿದೆ. ಇದರ ಮುಂದೆಯೇ ಗರುಡಗಂಬ ಇದ್ದು ಇದನ್ನು ಜೈನರ ಗರುಡಗಂಬ ಎನ್ನಲಾಗುತ್ತದೆ. ಈ ಸ್ಥಳದಲ್ಲೇ ನಾಲ್ಕು ಕಾಲಿನ ಮಂಟಪ ಇದ್ದು, ಕಲ್ಲಿನಿಂದ ಹೊಡೆದರೆ ತಮಟೆ ಶಬ್ದ ಬರುತ್ತದೆ. ಈ ಹಿಂದೆ ವಿವಾಹ ಸಂದರ್ಭದಲ್ಲಿ ಈ ತಮಟೆ ಶಬ್ದ ನುಡಿಸುತ್ತಿದ್ದರು ಎಂಬ ಪ್ರತೀತಿ ಇದೆ.
ಹಿಂದೆ ಅಜ್ಜಿಯೊಬ್ಬರು ಬೆಳೆದಿದ್ದ ಬೃಹತ್ ಕುಂಬಳಕಾಯಿಯನ್ನು ಕಲ್ಯ ಗ್ರಾಮದಲ್ಲಿ ಮಾರಾಟ ಮಾಡಲು ಬಂದಿದ್ದಾಗ ಯಾರೂ ಖರೀದಿಸಲಿಲ್ಲ. ಇದರಿಂದ ಕುಪಿತಗೊಂಡ ಅಜ್ಜಿ ಊರಿನ ಮುಂಭಾಗ ಕುಂಬಳಕಾಯಿ ಒಡೆದು ಈ ಊರು ಎಂದಿಗೂ ಹೀಗೆಯೇ ಇರಲಿ ಎಂದು ಶಾಪ ಹಾಕಿದಳಂತೆ. ಹಾಗಾಗಿ ಇಂದಿಗೂ ಈ ಊರಿನಲ್ಲಿರುವವರು ಹಳೆಯ ಮನೆಗಳಲ್ಲಿಯೇ ವಾಸಿಸುತ್ತಿದ್ದಾರೆ. ಊರುಬಿಟ್ಟವರು ಮಾತ್ರ ಹೊಸ ಮನೆ ಕಟ್ಟಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಕುಂಬಳಕಾಯಿ ಹೊತ್ತು ನಿಂತಿರುವ ಕಲ್ಲಿನಮೂರ್ತಿ ಇಲ್ಲಿದೆ.
ಕಲ್ಲೇಶ್ವರ ಬೆಟ್ಟದ ತಪಲಿನಲ್ಲಿ ಕಣ್ವ ನದಿಯ ಉಗಮ ಸ್ಥಾನವಿದೆ, ಇಲ್ಲಿರುವ 100 ಅಡಿಗೂ ಎತ್ತರದ ಬೃಹತ್ ವನಬಂಡೆಯಲ್ಲಿ ಜೈನಮೂರ್ತಿ ಕೆತ್ತಲು ಸಾಕಷ್ಟು ಶಿಲ್ಪಿಗಳು ಬಂಡೆಯನ್ನು ಪರಿಶೀಲಿಸಿದಾಗ ಈ ಬಂಡೆ ನಿರ್ಮಾಣಕ್ಕೆ ಯೋಗ್ಯವಲ್ಲ ಎಂಬ ಕಾರಣಕ್ಕೆ ಕಾಮಗಾರಿ ನಡೆದಿಲ್ಲ. ಜೈನರಿಗೆ ಸಂಬಂಧಿಸಿದ ವಿಗ್ರಹವೊಂದನ್ನು ರಕ್ಷಿಸಿ ರಾಮನಗರದ ಜಾನಪದ ಲೋಕದಲ್ಲಿಟ್ಟಿದ್ದು ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಕಲ್ಪಿಸಿರುವುದನ್ನು ಸ್ಮರಿಸಬಹುದಾಗಿದೆ. ಬೆಟ್ಟದ ಅಭಿವೃದ್ಧಿಗೆ ಈ ಹಿಂದೆ ಬಿ.ಡಿ. ಜತ್ತಿ, ರಾಣಿ ಸತೀಶ್ ಅವರು ಸ್ವಲ್ಪ ಪ್ರಯತ್ನಿಸಿದ್ದನ್ನು ಬಿಟ್ಟರೆ, ಇಂದಿಗೂ ಬೆಟ್ಟಕ್ಕೆ ತೆರಳಲು ದಾರಿ ಇಲ್ಲ. ಪಾರಂಪರಿಕ ತಾಣವಾಗುವ ಎಲ್ಲ ಅರ್ಹತೆ ಈ ಬೆಟ್ಟಕ್ಕಿದೆ ಎನ್ನುತ್ತಾರೆ ಗ್ರಾಮದ ಮೋಹನ್, ಜಯತೀರ್ಥ, ರಾಮಸ್ವಾಮಿ, ಸಚ್ಚಿದಾನಂದ ಶಾಸ್ತ್ರಿ.