ಜಿಲ್ಲೆ

ಗ್ರಾಮ ದೇವತೆಯರ ಜಾತ್ರೆ ಇಂದಿನಿಂದ

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಯಾದವಾಡ ಗ್ರಾಮದಲ್ಲಿ 21 ವರ್ಷಗಳ ಬಳಿಕ ಮೇ 1 ರಿಂದ 9ರ ವರೆಗೆ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದ್ದು, ನಿತ್ಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮೇ 1ರಂದು ಬೆಳಗ್ಗೆ 8ಕ್ಕೆ ನಯಾನಗರದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕುಂಭಮೇಳ, ಆರತಿ, ಡೊಳ್ಳು, ಭಜನೆ ವಾದ್ಯದಿಂದ ಮೆರವಣಿಗೆ ಮೂಲಕ ಗ್ರಾಮದೇವಿಯರಾದ ದುರ್ಗಮ್ಮ, ದ್ಯಾಮಮ್ಮರ ಪುರ ಪ್ರವೇಶ ಆಗಲಿದೆ. ಮೇ 2ರಂದು ಬ್ರಾಹ್ಮಿ ಮುಹೂರ್ತದಲ್ಲಿ ರಾಚೂಟೇಶ್ವರ ಸ್ವಾಮೀಜಿ ಹಾಗೂ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇವಿಯರಿಗೆ ಅಭಿಷೇಕ, ಕುಂಕುಮಾರ್ಚನೆ, ಹೋಮ-ಹವನ, ದೃಷ್ಟಿ ಬರೆಯುವ ಕಾರ್ಯಕ್ರಮ, ಪ್ರಾಣ ಪ್ರತಿಷ್ಠಾಪನೆ, ಮಾಂಗಲ್ಯ ಧಾರಣೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಮೇ 3ರಂದು ರೋಣದ ಶ್ರವಣಕುಮಾರ ಸ್ವಾಮೀಜಿ ಹಾಗೂ ನಯಾನಗರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಭಿಷೇಕ, ಕುಂಕುಮಾರ್ಚನೆ, ಹೋಮ ಹಾಗೂ ಹೊನ್ನಾಟ, ಮೇ 4 ಮತ್ತು 5ರಂದು ಚಂಡಿಕಾಹೋಮ, ಹೊನ್ನಾಟ, ಮೇ 6ರಂದು ಚಂಡಿಕಾಹೋಮ ಹಾಗೂ ಪಾದಗಟ್ಟಿ ಸ್ಥಾಪನೆ, ಮೇ 7ರಂದು ಚಂಡಿಕಾಹೋಮ ಮತ್ತು ಭಕ್ತರಿಂದ ಉಡಿ ತುಂಬುವ ಕಾರ್ಯಕ್ರಮವಿದೆ. ಮೇ 8ರಂದು ಚಂಡಿಕಾಹೋಮ ಹಾಗೂ ರಾತ್ರಿ ದೇವಿಯರು ಸೀಮೆಗೆ ಹೊರಡಲಿದ್ದಾರೆ. ಮೇ 9ರಂದು ನವಕನ್ನಿಕೆಯರ ಪೂಜೆ, ಪೂರ್ಣಾಹುತಿ ಜರುಗಲಿದೆ. ನಿತ್ಯ ರಾತ್ರಿ 8 ರಿಂದ ಅಮ್ಮಿನಬಾವಿ, ಉಪ್ಪಿನಬೆಟಗೇರಿ ಸೇರಿ ವಿವಿಧ ಮಠಾಧೀಶರಿಂದ ಆಶೀರ್ವಚನ ನಡೆಯಲಿದೆ.

9 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಹಾಸ್ಯ, ಜಾನಪದ, ಸವಾಲ್​ ಭಜನೆ, ಸಂಗೀತ, ನಾಟಕ ಪ್ರದರ್ಶನ ಸೇರಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.