ಜಿಲ್ಲೆ

ಸಾಧನೆಯ ಹಾದಿಯಲ್ಲಿ ಹಳ್ಳಿಮಕ್ಕಳು

Gadag

ವಿಜಯವಾಣಿ ಸುದ್ದಿಜಾಲ ಶಿರಹಟ್ಟಿ

ಶಹರಕ್ಕಿಂತ ಹಳ್ಳಿ ಮಕ್ಕಳೇ ಸ್ಟ್ರಾಂಗ್ ಎನ್ನುವುದನ್ನು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶ್ವೇತಾ ಮೇಟಿ ಹಾಗೂ ವರವಿ ಗ್ರಾಮದ ವಿನೋದಾ ಮೀಸಿ ಸಾಬೀತು ಮಾಡಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಪಡೆದು ಸಾಧನೆಗೆ ಬಡತನ ಅಡ್ಡಿಯಾಗದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ವರವಿ ಗ್ರಾಮದ ನಿವಾಸಿ, ಶಿರಹಟ್ಟಿ ಎಫ್.ಎಂ. ಡಬಾಲಿ ಪ.ಪೂ. ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿನೋದಾ ಮೀಸಿ ಪಿಯು ಕಲಾ ವಿಭಾಗದಲ್ಲಿ 557 ಅಂಕ (ಶೇ. 92.83) ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆಯ ತಂದೆ ಈರಪ್ಪ, ತಾಯಿ ಶೋಭಕ್ಕ ಮೀಸಿ ಅವರಿಗೆ ಇದ್ದದ್ದು ಒಂದು ಎಕರೆ ಜಮೀನು ಮಾತ್ರ. ಹೀಗಾಗಿ ಕುಟುಂಬ ನಿರ್ವಹಣೆಗೆ ಕೃಷಿಯೊಂದಿಗೆ ಕೂಲಿ ಕೆಲಸ ಮಾಡುತ್ತಾರೆ. ರಜೆಯ ದಿನಗಳಲ್ಲಿ ವಿನೋದಾ ಸಹ ಇವರೊಂದಿಗೆ ಕೂಲಿ ಕೆಲಸ ಮಾಡುತ್ತ ಕುಟುಂಬಕ್ಕೆ ನೆರವಾಗುತ್ತಿದ್ದಳು. ‘ಯಾವುದೇ ಟ್ಯೂಶನ್​ಗೆ ಹೋಗದೇ ಕಾಲೇಜ್​ನಲ್ಲಿ ಉಪನ್ಯಾಸಕರು ನೀಡಿದ ಟಿಪ್ಪಣಿ ಬಳಸಿ ಶ್ರದ್ಧೆವಹಿಸಿ ವ್ಯಾಸಂಗ ಮಾಡುತ್ತಿದ್ದೆ ಹೀಗಾಗಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಯಿತು’ ಎನ್ನುತ್ತಾಳೆ ವಿನೋದಾ.

ಸಾಧನೆಗೆ ಯಾವ ಊರು, ಯಾವ ಕಾಲೇಜಾದರೇನು? ಸಾಧಿಸುವ ಛಲವಿದ್ದರೆ ಸಾಧನೆ ಸಾಧ್ಯ ಎನ್ನುವುದಕ್ಕೆ ಬನ್ನಿಕೊಪ್ಪ ಗ್ರಾಮದ ಶ್ವೇತಾ ಈರಪ್ಪ ಮೇಟಿ ಸಾಕ್ಷಿಯಾಗಿದ್ದಾಳೆ.

ಹರಿಹರ ತಾಲೂಕಿನ ಕುರಬರಹಳ್ಳಿಯ ಮಾನ್ಯತಾ ಬಾಲಕಿಯರ ವಸತಿಯುತ ಪ.ಪೂ.ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ 582 ಅಂಕ (ಶೇ. 97) ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.

ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕನಾಗಿದ್ದ ಈಕೆಯ ತಂದೆ ಈರಪ್ಪ 14 ವರ್ಷದ ಹಿಂದೆ ಹೃದಯಾಘಾತದಿಂದ ನಿಧನ ಹೊಂದಿದ್ದರಿಂದ ಅನುಕಂಪದ ಆಧಾರದಲ್ಲಿ ತಾಯಿಯು ಸಾರಿಗೆ ಘಟಕದಲ್ಲಿ ಗುಮಾಸ್ತಳಾಗಿ ಕೆಲಸ ಮಾಡುತ್ತಿದ್ದಾರೆ.

ಶ್ವೇತಾ ಮೇಟಿ ಪ್ರಸಕ್ತ ವರ್ಷದ ದ್ವಿತೀಯ ಪಿಯುನಲ್ಲಿ ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಗಣಿತ-100, ಕನ್ನಡ-93, ಇಂಗ್ಲಿಷ್-90 ಅಂಕ ಪಡೆದಿದ್ದಾಳೆ.

ಈಕೆಯ ಯಶಸ್ಸಿನ ಹಿಂದೆ ತಾಯಿ ಮಂಜುಳಾ ಮತ್ತು ಚಿಕ್ಕಪ್ಪಂದಿರ ಬೆಂಬಲವಿದೆ. ತಂದೆಯ ಸಾವಿನ ನೋವು ಮರೆಸಿ ಮಗಳಿಗೆ ಆತ್ಮಸ್ಥೈರ್ಯ ತುಂಬಿ ಉನ್ನತ ಮಟ್ಟದ ಶಿಕ್ಷಣ ನೀಡಿ ಆಕೆಯನ್ನು ಸಮಾಜ ಸೇವಾ ವಲಯದಲ್ಲಿ ಕಾಣಬೇಕೆಂಬ ಹಂಬಲ ತಾಯಿಯದ್ದಾಗಿದೆ. ಸಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಶ್ವೇತಾ ಮುಂದೆ ವೈದ್ಯಳಾಗುವ ಗುರಿ ಹೊಂದಿದ್ದಾಳೆ.