ರಾಮನಗರ : ವಿದ್ಯಾರ್ಥಿಗಳ ಶಿಕ್ಷಣಕ್ಕೆ ಗ್ರಾಮ ಪಂಚಾಯಿತಿ ಪೂರಕ ವಾತಾವರಣ ನಿರ್ಮಿಸಿ, ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಬಿಳಗುಂಬ ಗ್ರಾಪಂ ಅಧ್ಯಕ್ಷ ಎಂ.ನವೀನ್ ತಿಳಿಸಿದರು.
ತಾಲೂಕಿನ ಬಿಳಗುಂಬ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬಿಳಗುಂಬ ಗ್ರಾಪಂ ವತಿಯಿಂದ ಗುರುವಾರ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದರು.
ನರೇಗಾ ಸೇರಿ ಹಲವು ಯೋಜನೆಯಡಿ ಶಾಲೆಗಳು ಅಭಿವೃದ್ಧಿ ಕಾಣುತ್ತಿವೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಪರಿಸರ ಸಂರಕ್ಷಣೆ, ದೇಶದ ಕಾನೂನು, ದುಶ್ಚಟಗಳ ಪರಿಣಾಮ, ಸ್ವಚ್ಛತೆ ಇವುಗಳ ಬಗ್ಗೆ ತಿಳಿಸಬೇಕು. ಇದರಿಂದ ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಲ್ಲಿ ಉತ್ತಮ ಶಿಕ್ಷಣ, ಪರಿಸರಪ್ರೇಮ, ಸನ್ನಡತೆ ಬರಲು ಸಾಧ್ಯ ಎಂದು ತಿಳಿಸಿದರು.
ಪಿಡಿಒ ಮಹೇಶ್ ಮಾತನಾಡಿ, ಗ್ರಾಪಂ ಶಾಲೆಗಳಲ್ಲಿಯೇ ಮಕ್ಕಳ ಗ್ರಾಮಸಭೆ ನಡೆಸಿ, ಶಾಲೆಗಳಲ್ಲಿನ ಸಮಸ್ಯೆ, ವಿದ್ಯಾರ್ಥಿಗಳಿಗೆ ಬೇಕಿರುವ ಸೌಲಭ್ಯಗಳ ಕುರಿತು ಮಾಹಿತಿ ಸಿಗುತ್ತದೆ. ತೆಗೆ ಸಭೆಯಲ್ಲಿ ಮಕ್ಕಳ ಹಕ್ಕುಗಳು, ಶಿಕ್ಷಣದ ಹಕ್ಕು, ಗ್ರಾಪಂನಿಂದ ದೊರೆಯುವ ಸೌಲಭ್ಯ ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಇದರಿಂದ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಮಾಹಿತಿ ಪಡೆದು ಶಾಲೆಗಳಲ್ಲಿರುವ ಸಮಸ್ಯೆ ಬಗೆಹರಿಸಿಕೊಳ್ಳಲು ವೇದಿಕೆಯಾಗುತ್ತದೆ ಎಂದರು.
ಶಾಲಾ ವಿದ್ಯಾರ್ಥಿಗಳಾದ ಕು.ಸಿಂಚನಾ ಮತ್ತು ವಿವೇಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಮಾರ್ಗದರ್ಶಿ ಅಧಿಕಾರಿ ಎಚ್.ಎಸ್.ಕುಮಾರ್, ಆರೋಗ್ಯ ಇಲಾಖೆಯ ಅಧಿಕಾರಿ ಸುರೇಶ್, ಸಿಆರ್‌ಪಿ ರಮೇಶ್, ಸಿಎಂಸಿಎ ಸಂಸ್ಥೆಯ ಮಹಮ್ಮದ್ ಶಫಿ, ಮುಖ್ಯಶಿಕ್ಷಕ ನಾಗಬೋರಯ್ಯ, ಉಪನ್ಯಾಸಕ ಕುಮಾರ್, ಶಿಕ್ಷಕ ಮಹದೇವಯ್ಯ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಜಿ.ಕೆ.ಸೌಭಾಗ್ಯಾ, ಸದಸ್ಯರಾದ ಪುಟ್ಟಸಿದ್ದೇಗೌಡ, ಯಶೋಧಮ್ಮ, ಬೋರೇಗೌಡ, ಚಂದ್ರಶೇಖರ್, ಶಿವಪ್ಪ, ನಾಗಮ್ಮ, ಕಾವೇರಮ್ಮ, ಶಿವಣ್ಣ, ಲೋಕೇಶ್, ಭಾಗ್ಯಮ್ಮ, ನೇತ್ರಾವತಿ, ಗೀತಾ, ಬಿಲ್‌ಕಲೆಕ್ಟರ್ ಮರಿವೆಂಕಟಯ್ಯ, ಎಸ್‌ಡಿಎ ತಿಮ್ಮಯ್ಯ, ಉಮಾ, ಪರಿಸರಪ್ರೇಮಿ ಬಿ.ಟಿ.ರಾಜೇಂದ್ರ ಇದ್ದರು.
ಗ್ರಾಮಸಭೆಯಲ್ಲಿ ಏನಾಯಿತು?
ಮಕ್ಕಳಿಗೆ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತು, ಶಿಕ್ಷಣದ ಹಕ್ಕು, ಕಾನೂನು, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಯ ಅಡ್ಡ ಪರಿಣಾಮ, ಶಿಕ್ಷೆ ಮುಂತಾದ ಮಾಹಿತಿಗಳನ್ನು ಸಭೆಯಲ್ಲಿ ತಿಳಿಸಿಕೊಡಲಾಗುತ್ತದೆ. ಇದೇ ಸಂದರ್ಭದಲ್ಲಿ ಕೂನಮುದ್ದನಹಳ್ಳಿಯಿಂದ ಬಿಳಗುಂಬ ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳು ನಮಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಕೇಳಿದರೆ ಕೆಲವು ಶಾಲಾ ವಿದ್ಯಾರ್ಥಿಗಳು ಶಾಲೆಗೆ ಕಂಪ್ಯೂಟರ್, ಪ್ರಾಜೆಕ್ಟರ್ ಮತ್ತು ಶೌಚಗೃಹ ಒದಗಿಸಿಕೊಡಿ ಎಂದು ಕೇಳಿಕೊಂಡರು.