ಹೊರ್ತಿ: ಗ್ರಾಮದ ಮೂಲಸೌಕರ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲ ಸದಸ್ಯರ, ಅಧಿಕಾರಿಗಳ ಮತ್ತು ಗ್ರಾಮಸ್ಥರ ಪರಸ್ಪರ ಸಹಕಾರ ಅವಶ್ಯ ಎಂದು ಇಂಚಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ರಾಠೋಡ ಹೇಳಿದರು.
ಸಮೀಪದ ಇಂಚಗೇರಿ ಗ್ರಾಮದ ಕರಬಸವೇಶ್ವರ ಸಭಾಭವನದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ವಿವಿಧ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆದು ಅವರು ಮಾತನಾಡಿದರು.
ಗ್ರಾಮದಲ್ಲಿ ನರೇಗಾ ವಿವಿಧ ಕಾಮಗಾರಿಗಳಾದ ಕೃಷಿ ಹೊಂಡ,ಬದು ನಿರ್ಮಾಣ,ಬಸಿಗಾಲುವೆ,ದನಗಳ ಕೊಟ್ಟಿಗೆಗಳ ನಿರ್ಮಾಣ,ಚೆಕ್ ಡ್ಯಾಂ ನಿರ್ಮಾಣ,ಹೂಳು ಎತ್ತುವ ಕಾರ್ಯ, ಚರಂಡಿ ನಿರ್ಮಾಣ ಮತ್ತು ಗ್ರಾಮದ ವಿವಿಧ ವಸತಿ ಪ್ರದೇಶಗಳಿಗೆ ತೆರಳುವ ರಸ್ತೆಗಳಿಗೆ ಮುರುಮ ಹಾಕುವುದು ಸೇರಿ ವಿವಿಧಕ್ರಿಯಾ ಯೋಜನೆಗಳನ್ನು ಮಾಡುವ ಕುರಿತು ಎಲ್ಲರ ಸರ್ವಾನುಮತದಿಂದ ಅನುಮೋದನೆ ಪಡೆಯಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಶಾರುಬಾಯಿ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು.ಲೆಕ್ಕಾಧಿಕಾರಿ ರಮೇಶ ಡೋಣಿ,ಕಾರ್ಯದರ್ಶಿ ಎಲ್.ಮುಲ್ಲಾ,ಉಪಾಧ್ಯಕ್ಷ ಮಾಳು ಬಿರಾದಾರ,ಸದಸ್ಯರಾದ ವಿಠಲ ರಾಠೋಡ,ಅದಿಲ್ ವಾಲಿಕಾರ,ಲಾಲೂ ರಾಠೋಡ, ಅಪ್ಪು ಚವ್ಹಾಣ,ಮಹಾದೇವ ನಾವಿ,ಪ್ರಕಾಶ ಪಾಟೀಲ,ರೇವಣಸಿದ್ಧ ಮಾನೆ,ಅಮಸಿದ್ದ ಪೂಜಾರಿ,ಕಸ್ತೂರಿ ಕಂಬಾರ,ಪ್ರಕಾಶ ಚವ್ಹಾಣ ಇತರರಿದ್ದರು.