ಮುದ್ದೇಬಿಹಾಳ: ಕುಂಟೋಜಿ ಗ್ರಾಪಂ ಕಚೇರಿ ಮುಂದೆ ಗರ್ಭಿಣಿ, ಗ್ರಾಪಂ ಸದಸ್ಯೆ ಮಂಜುಳಾ ಹುಲಗಣ್ಣಿ ಧರಣಿ ನಡೆಸಿದರು. 
ಜಿಲ್ಲೆ

ಗ್ರಾಪಂ ಸದಸ್ಯೆಏಕಾಂಗಿ ಧರಣಿ

ದತ್ತಾತ್ರೇಯ ಪಿ ಕುಲಕರ್ಣಿ

ಮುದ್ದೇಬಿಹಾಳ: ಜನರಿಂದ ಚುನಾಯಿತಳಾಗಿರುವ ನನ್ನ ಮಾತಿಗೆ ಪಿಡಿಒ ಮನ್ನಣೆ ಕೊಡುತ್ತಿಲ್ಲ ಎಂದು ಆರೋಪಿಸಿ ಕುಂಟೋಜಿ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಹುಲಗಣ್ಣಿ ಅವರು ಗ್ರಾ.ಪಂ. ಕಚೇರಿ ಎದರು ಬುಧವಾರ ಏಕಾಂಗಿ ಧರಣಿ ನಡೆಸಿದ್ದಾರೆ.

ನಾನು 6 ತಿಂಗಳ ಗರ್ಭಿಣಿಯಾಗಿದ್ದರೂ ಕಚೇರಿಗೆ ಬಂದೇ ಜನರ ಸಮಸ್ಯೆ ಕೇಳಬೇಕು. ಬೇರೆಯವರನ್ನು ಕಳಿಸಬಾರದು ಎಂದು ಒತ್ತಾಯಿಸುತ್ತಾರೆ. ನನ್ನ ಹಕ್ಕಿಗೆ ಚ್ಯುತಿ ತಂದಿದ್ದಾರೆ ಎಂದು ದೂರಿ ಕಚೇರಿ ಮುಂದೆ ಕುಳಿತು ಧರಣಿ ನಡೆಸಿದರು.

ಗರ್ಭಿಣಿಯಾಗಿದ್ದರಿಂದ ನಡೆಯಲು ಸಮಸ್ಯೆ ಆಗುತ್ತಿದೆ. ನಾನು ಪ್ರತಿನಿಧಿಸುವ ವಾರ್ಡನಲ್ಲಿ ಕುಡಿಯುವ ನೀರಿನ, ಚರಂಡಿ ಸ್ವಚ್ಛತೆ ಸಮಸ್ಯೆ ಹೇಳಿದರೆ ಸ್ಪಂಧಿಸುವುದಿಲ್ಲ. ಕಚೇರಿಗೆ ನನ್ನ ಪರವಾಗಿ ಬೇರೆಯವರನ್ನು ಕಳಿಸಿದರೆ ನಾನೇ ಬರಬೇಕು ಎಂದು ಅವರೊಂದಿಗೆ ವಾದಿಸುತ್ತಾರೆ. ಕಚೇರಿಗೆ ನಾನೇ ಹೇಗೋ ಕಷ್ಟಪಟ್ಟು ಬಂದರೆ ಸರಿಯಾಗಿ ಸ್ಪಂಧಿಸುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಹಸೀಲ್ದಾರ್, ಜಿಲ್ಲಾಧಿಕಾರಿ ಸೇರಿ ಹಲವರಿಗೆ ಪಿಡಿಓ ಮೇಲೆ ಹಕ್ಕುಚ್ಯುತಿ ದೂರು ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದಕ್ಕೂ ಮುನ್ನ ಮಂಜುಳಾ ಅವರು ಗ್ರಾಪಂ ಕಚೇರಿ ಒಳಗೆ ಹೋಗಿ ನೆಲದ ಮೇಲೆ ಕುಳಿತ, ಪಿಡಿಒ ಖುರ್ಚಿ ಮೇಲೆ ಕುಳಿತ ಮಾತುಕತೆಯ ವಿಡಿಯೋ ವೈರಲ್ ಆಗಿದ್ದು ಪಿಡಿಒ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.