ದೇವದುರ್ಗ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಗ್ರಾಪಂ ಸದಸ್ಯರು ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ಯೋಜನಾಧಿಕಾರಿ ಡಾ.ಟಿ.ಎಸ್.ರೋಣಿ ಹೇಳಿದರು.
ಇದನ್ನೂ ಓದಿ: ಸ್ವಚ್ಛತೆಗೆ ಪ.ಪಂ. ಜತೆ ಕೈ ಜೋಡಿಸಿ
ತಾಪಂ ಸಭಾಂಗಣದಲ್ಲಿ ಗ್ರಾಪಂ ಸದಸ್ಯರು ಹಾಗೂ ಸ್ವಸಹಾಯ ಸಂಘದ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಘನ ತ್ಯಾಜ್ಯ ವಿಲೇವಾರಿ ಹಾಗೂ ಹಳ್ಳಿ ಸಂತೆ ತರಬೇತಿ ಶಿಬಿರದಲ್ಲಿ ಶನಿವಾರ ಮಾತನಾಡಿದರು. ಅಶುದ್ಧ ನೀರು, ಅನೈರ್ಮಲ್ಯ ಹಾಗೂ ಸೊಳ್ಳೆಗಳ ಕಡಿತದಿಂದ ಸಾಂಕ್ರಾಮಿಕ ರೋಗಗಳು ಆವರಿಸುತ್ತಿವೆ. ಹೀಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಕಾಯಕ್ರಮ ಆಯೋಜಿಸಲಾಗಿದೆ. ಇದರ ಭಾಗವಾಗಿ ಗ್ರಾಪಂ ಸದಸ್ಯರು ಹಾಗೂ ಸ್ವಸಹಾಯ ಸಂಘದ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ.
ಹಳ್ಳಿಗಳಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಹಾಗೂ ಆರೋಗ್ಯ ಜಾಗೃತಿ ಮೂಡಿಸುವ ಜವಾಬ್ದಾರಿ ಗ್ರಾಪಂ ಮೇಲಿದೆ. ಗ್ರಾಪಂ ಸದಸ್ಯರು ವಾರ್ಡ್‌ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತರಬೇತಿ ಪಡೆಯುವ ಮಹಿಳೆಯರು ಸಂಘದ ಸದಸ್ಯರ ಸಭೆ ಮಾಡಿ ವೈಯಕ್ತಿಕ ಸ್ವಚ್ಛತೆ ಹಾಗೂ ಪರಿಸರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದರು. ತಾಪಂ ಇಒ ಬಸವರಾಜ ಹಟ್ಟಿ, ನರೇಗಾ ಸಹಾಯಕ ನಿರ್ದೇಶಕಿ ಮಹೇಶ್ವರಿ, ತಾಪಂ ವ್ಯವಸ್ಥಾಪಕ ಮಾರ್ಕಂಡಯ್ಯ ಪ್ರಮುಖರಾದ ಪ್ರದೀಪ್ ಕುಮಾರ, ಭೀಮರಾಯ, ಹನುಮಂತ್ರಾಯ ಇತರರಿದ್ದರು.