ಜಿಲ್ಲೆ

ಕೈಗೆ ಕಪ್ಪು ಪಟ್ಟಿ ಧರಿಸಿ ಎರಡನೇ ಹಂತದ ಪ್ರತಿಭಟನೆ

Davangere - Desk - Shobha Krishna Gowda

ನ್ಯಾಮತಿ: ಮೂಲ ಸೌಲಭ್ಯ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಘಟಕವು ಸೋಮವಾರದಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಎರಡನೇ ಹಂತದ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಘಟಕದ ತಾಲೂಕು ಅಧ್ಯಕ್ಷ ಜಿ.ರಾಘವೇಂದ್ರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಬೇಡಿಕೆ ಈಡೇರದ ಹೊರತು ಅನಿರ್ದಿಷ್ಟಾವಧಿ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.

2024ರ ಅಕ್ಟೋಬರ್​ನಲ್ಲಿ 1 ವಾರಗಳ ಕಾಲ ಮೊದಲನೆ ಹಂತದ ಪ್ರತಿಭಟನೆ ನಡೆಸಿದಾಗ ಸರ್ಕಾರ ಸ್ಪಂದಿಸುವ ಭರವಸೆ ನೀಡಿತ್ತು, ಅದರೆ ಈವರೆಗೂ ಯಾವುದೇ ಬೇಡಿಕೆ ಈಡೇರಿಸಿಲ್ಲ. ದಿನೇದಿನೆ ಕೆಲಸದ ಒತ್ತಡ ಹೆಚ್ಚಿಸಲಾಗಿದೆ, ಮೂಲ ಸೌಕರ್ಯಗಳಿಲ್ಲದೆ ಸಮಸ್ಯೆಗಳ ಸುಳಿಯಲ್ಲಿ ಕೆಲಸ ಮಾಡಬೇಕಿದೆ. ಹೆಚ್ಚುವರಿ ಪರಿಹಾರ, ಸವಲತ್ತು ಇಲ್ಲದೇ ವರ್ಷಪೂರ್ತಿ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇ-ಪೌತಿ, ಸುಸಜ್ಜಿತ ಕಚೇರಿ, ಲ್ಯಾಪ್​ಟಾಪ್, ಇಂಟರ್​ನೆಟ್, ಪ್ರಿಂಟರ್, ಸ್ಕ್ಯಾನರ್ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ, ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ವರ್ಷಪೂರ್ತಿ ಕೆಲಸ ಮಾಡುವ ಆಡಳಿತ ಅಧಿಕಾರಿಗಳಿಗೆ ಒಂದು ತಿಂಗಳ ಹೆಚ್ಚುವರಿ ವೇತನ ನೀಡಬೇಕು. ಪ್ರಯಾಣ ಭತ್ಯೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಕಾಯರ್åದರ್ಶಿ ಶಿವಕುಮಾರ್, ಉಪಾಧ್ಯಕ್ಷ ವಿಜಯಕುಮಾರ್, ಖಜಾಂಚಿ ಸೋಮಯ್ಯ ಹಿರೇಮಠ್, ಎಂ.ಟಿ. ಪಾಟೀಲ್, ಕುಬೇಂದ್ರನಾಯ್ಕ, ವೇಣುಗೋಪಾಲ್, ಮುಬಾರಕ್, ಅಶೋಕ, ಹರೀಶ್, ವಿಶ್ವನಾಥ್, ಚಂದ್ರಮ್ಮ ರಂಗನಾಥ್ ಸೇರಿ ಬೆಳಗುತ್ತಿ ಮತ್ತು ಗೋವಿನಕೋವಿ ಹೋಬಳಿ ಸಿಬ್ಬಂದಿ ಇದ್ದರು.