ಜಿಲ್ಲೆ

ನೌಕಕರ ಪ್ರತಿಭಟನೆಗೆ ಗ್ರಾಮಾಡಳಿತ ಸ್ತಬ್ಧ

ಗೋಪಾಲಕೃಷ್ಣ ಪಾದೂರ್

ಉಡುಪಿ: ಗ್ರಾಮಾಡಳಿತದ ಕೇಂದ್ರಸ್ಥಾನ ಗ್ರಾಮ ಪಂಚಾಯಿತಿ. ಆದರೆ ಕಳೆದ 1 ವಾರದಿಂದ ಪಿಡಿಒ ಸಹಿತ ಎಲ್ಲಾ ನೌಕರರು ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿರುವುದರಿಂದ ದೈನಂದಿನ ಕೆಲಸದಲ್ಲಿ ವ್ಯತ್ಯವಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯ 155 ಗ್ರಾಪಂಗಳಲ್ಲಿ 136 ಮಂದಿ ಪಿಡಿಒಗಳು ಕಾರ್ಯನಿರ್ವಹಿಸುತ್ತಿದ್ದು, 19 ಹುದ್ದೆಗಳು ಖಾಲಿ ಇವೆ. 52 ಮಂದಿ ಗ್ರೇಡ್​&1 ಕಾರ್ಯದರ್ಶಿಗಳು, 47 ಮಂದಿ ಗ್ರೇಡ್​&2 ಕಾರ್ಯದರ್ಶಿಗಳಿದ್ದು, ತಲಾ 27 ಹುದ್ದೆಗಳು ಖಾಲಿ ಇವೆ. ಎಸ್​ ಡಿ ಎ ಹುದ್ದೆಯಲ್ಲಿ 59ರ ಬದಲಿಗೆ 42 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

1993ರ ಪಂಚಾಯತ್​ರಾಜ್​ ಕಾಯ್ದೆ ಪ್ರಕಾರ ಗ್ರಾ.ಪಂ.ಗೆ ನಿಗದಿಪಡಿಸಲಾದ ಜನಸಂಖ್ಯೆ ಉಡುಪಿ ಜಿಲ್ಲೆಗೆ 2500. ಪ್ರಸ್ತುತ ಈ ಜನಸಂಖ್ಯೆ ದುಪ್ಪಟ್ಟಾಗಿದ್ದರೂ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿಲ್ಲ. ಮೂರು ವರ್ಷಗಳಿಂದ ಖಾಲಿಯಾದ ಹುದ್ದೆಗೆ ನೇಮಕಾತಿ ನಡೆದಿಲ್ಲ. ಎನ್​ಆರ್​ಇಜಿ ಸಹಿತ ನೂರಾರು ಯೋಜನೆಗಳು ಜಾರಿಯಾಗುತ್ತಿದ್ದರೂ ಸಮರ್ಥವಾಗಿ ನಿರ್ವಹಿಸಲೂ ಸಿಬ್ಬಂದಿ ಕೊರತೆ ಉಂಟಾಗಿದೆ. ಪಿಡಿಒ, ಕಾರ್ಯದರ್ಶಿ, ಎಸ್​ಡಿಎ ಅವರಿಗೆ ಬಡ್ತಿ ಇಲ್ಲದೆ ಜೀವನ ಪರ್ಯಂತ ಒಂದೆ ಹುದ್ದೆಯಲ್ಲಿ ಕೆಲಸ ಮಾಡುವಂತಾಗಿದೆ. ವಾಟರ್​ಮೆನ್​, ಬಿಲ್​ ಕಲೆಕ್ಟರ್​, ಡಾಟಾ ಎಂಟ್ರಿ ಆಪರೇಟರ್​, ಸ್ವಚ್ಛತಾ ಸಿಬಂದಿ ಸರ್ಕಾರಿ ನೌಕರರೋ ಅಥವಾ ಹೊರಗುತ್ತಿಗೆ ಸಿಬ್ಬಂದಿಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರಿಗೆ ಪಿಎಫ್​, ಇಎಸ್​ಐ ಸೌಲಭ್ಯಗಳಿಲ್ಲ. ಹೀಗಾಗಿ ಅ.4ರಿಂದ ಪಂಚಾಯತ್​ ರಾಜ್​ ಇಲಾಖೆ ವ್ಯಾಪ್ತಿಯ ಎಲ್ಲ ನೌಕರರು ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಗಂಭೀರವಾಗಿಲ್ಲ.

ಈ ಹಿಂದೆ ಬೇರೆ ಬೇರೆ ಸಂಟನೆಗಳ ಮೂಲಕ ಪ್ರತಿಭಟನೆ ನಡೆಯುತ್ತಿದ್ದರೂ ಪಿಡಿಒ, ಕಾರ್ಯದರ್ಶಿ, ಎಸ್​ಡಿಎ, ಪಂಚ ನೌಕರರಾದ ವಾಟರ್​ ಮೆನ್​, ಬಿಲ್​ ಕಲೆಕ್ಟರ್​, ಅಟೆಂಡರ್​, ಡಾಟ ಎಂಟ್ರಿ ಆಪರೇಟರ್​, ಸ್ವಚ್ಛತ ಸಿಬಂದಿ ಸಹಿತ 11 ವೃಂದ ಸಂಟನೆಗಳು ಒಟ್ಟಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ನೌಕರರು ಪಂಚಾಯಿತಿಯಲ್ಲಿ ಕೆಲಸಕ್ಕೆ ಗೈರಾಗಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿ ಸೇವೆಗಳು ಅಸ್ತವ್ಯಸ್ತವಾಗಿವೆ.

ಸೇವೆಯಲ್ಲಿ ವ್ಯತ್ಯಯ
ಗ್ರಾ.ಪಂ. ನೌಕರರ ಮುಷ್ಕರದಿಂದ ಕುಡಿಯುವ ನೀರು ಪೂರೈಕೆ, ಬೀದಿದೀಪ ನಿರ್ವಹಣೆ, 9&11 ಖಾತೆ ಸೇವೆ, ಕಟ್ಟಡ ಲೈಸೆನ್ಸ್​, ನಿಧನ ಪ್ರಮಾಣ ಪತ್ರ, ಉದ್ದಿಮೆ ಪರವಾನಿಗೆ ಪತ್ರ, ಉದ್ಯೋಗ ಖಾತ್ರಿ ಯೋಜನೆ, ಅರ್ಜಿ ವಿಲೇವಾರಿ, ತ್ವರಿತ ಕಾರ್ಯಗಳ ಆದೇಶ ಮತ್ತಿತರ ಸೇವೆಗಳಿಗೆ ತೊಂದರೆಯಾಗಿದೆ.

ಖಾಲಿ ಹುದ್ದೆಗಳ ನೇಮಕಕ್ಕೆ ಸರ್ಕಾರ ಮುಂದಾಗಿಲ್ಲ. ಅನೇಕ ಯೋಜನೆಗಳನ್ನು ಗ್ರಾಪಂ ಮೂಲವೇ ಜಾರಿಗೊಳಿಸುತ್ತಿದೆ. ಇದರಿಂದ ಸಿಬ್ಬಂದಿಗೆ ಕೆಲಸದೊತ್ತಡ ಹೆಚ್ಚಾಗುತ್ತಿದ್ದು, ಸೇವಾ ನಿಯಮ ರೂಪಿಸಿ, ಸಂಬಳ ಹೆಚ್ಚಳ ಮಾಡಬೇಕು. ಸರ್ಕಾರ ಪಿಡಿಒ, ಕಾರ್ಯದರ್ಶಿ ಸಹಿತ ಗ್ರಾ.ಪಂ. ನೌಕರರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಬೇಕು.&ಮಂಜುನಾಥ್​ ಶೆಟ್ಟಿ , ಜಿಲ್ಲಾಧ್ಯಕ್ಷ ಪಿಡಿಒ ಕ್ಷೇಮಾಭಿವೃದ್ಧಿ ರಾಜ್ಯ ಸಂಘ