ಕಡೂರು ತಾಲೂಕು ಕಚೇರಿ ಎದುರು ಕಲ್ಕರೆ ಗ್ರಾಮದ ರೈತರು ಧರಣಿ ನಡೆಸಿದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎಚ್.ರವಿ, ನಾಗರಾಜ್, ನವೀನ್, ಅಜಯ್ ಉಪ್ಪಾರ್, ಹೊನ್ನೇಶ್ ಇತರರಿದ್ದರು.  
ಜಿಲ್ಲೆ

ಗ್ರಾಮ ಲೆಕ್ಕಾಧಿಕಾರಿ ಬಂಧನ

ಎಸ್.ಎನ್.ರವೀಂದ್ರ

ಕಡೂರು: ನೆರೆ ಪರಿಹಾರದ ಹಣ ದುರುಪಯೋಗ ಪಡಿಸಿಕೊಂಡು ಅನರ್ಹರಿಗೆ ನೀಡಿದ ಆರೋಪದ ಮೇಲೆ ಕಲ್ಕೆರೆ ಗ್ರಾಮದ ಈ ಹಿಂದಿನ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸದ್ಯ ಸೋಮನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಪಾಲಾಕ್ಷಮೂರ್ತಿ ಅವರನ್ನು ತರೀಕೆರೆ ಎಸಿ ಡಾ. ಕಾಂತರಾಜ್ ದೂರಿನ್ವಯ ಅಜ್ಜಂಪುರ ಪೊಲೀಸರು ಭಾನುವಾರ ಬಂಧಿಸಿ ಕಡೂರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ತಾಲೂಕು ಕಚೇರಿ ಮುಂದೆ ಕಲ್ಕರೆ ಗ್ರಾಮದ ರೈತರು ನಡೆಸುತ್ತಿರುವ ಧರಣಿ ಭಾನುವಾರವೂ ಮುಂದುವರಿಯಿತು. ರೈತರು ತಾಲೂಕು ಕಚೇರಿ ಆವರಣದಲ್ಲೇ ಅಡುಗೆ ಮಾಡಿಕೊಂಡು ಧರಣಿ ಸ್ಥಳದಲ್ಲಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಭಾನುವಾರ ತಹಸೀಲ್ದಾರ್ ಎಂ.ಪಿ.ಕವಿರಾಜ್ ಪ್ರತಿಭಟನಾ ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದರು. ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ. ಪ್ರತಿಭಟನೆ ಸ್ಥಗಿತಗೊಳಿಸಿ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಹೇಳಿಕೆ ನೀಡಬೇಕು. ಪಾಲಾಕ್ಷಮೂರ್ತಿ ಬಂಧನದಿಂದ ಸಮಸ್ಯೆ ಬಗೆಹರಿದಿಲ್ಲ. ಅವರ ಜತೆ ಸಹಕರಿಸಿರುವ ನಾಲ್ವರು ಮಧ್ಯವರ್ತಿಗಳನ್ನೂ ಬಂಧಿಸಬೇಕು. ಅರ್ಹ ರೈತರಿಗೆ ಪರಿಹಾರ ಹಣ ನೀಡಬೇಕು. ಅಲ್ಲಿಯ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಬಿಗಿ ಪಟ್ಟುಹಿಡಿದರು.ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೋಡಿಹಳ್ಳಿ ಪ್ರದೀಪ್ ಮಾತನಾಡಿ, ನಮ್ಮ ಹೋರಾಟ ಕೇವಲ ಕಲ್ಕೆರೆ ಭಾಗದ ರೈತರ ಪರವಾಗಿ ಮಾತ್ರವಲ್ಲ. ತಾಲೂಕಿನಲ್ಲಿ ಎಲ್ಲಿಯೇ ಈ ರೀತಿ ಅಕ್ರಮ ನಡೆದಿದ್ದರೂ ಅದರ ವಿರುದ್ಧ ಹೋರಾಟ ಮಾಡುತ್ತೇವೆ. ಫೆ.5ರಂದು ಮನೆಯಿಂದ ಜಾನುವಾರುಗಳನ್ನೂ ಕರೆತಂದು ಇಲ್ಲಿಯೇ ಕಟ್ಟಿಕೊಂಡು ಧರಣಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎಚ್.ರವಿ, ಉಪಾಧ್ಯಕ್ಷ ನಾಗರಾಜ್, ನವೀನ್, ಕೆವೈಎಸ್‌ಎಫ್ ತಾಲೂಕು ಅಧ್ಯಕ್ಷ ಅಜಯ್ ಉಪ್ಪಾರ್, ಕಲ್ಕೆರೆ ಹೊನ್ನೇಶ್ ಇದ್ದರು. ಸ್ಥಳದಲ್ಲಿ ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ಇರಿಸಿದ್ದು, ಪೊಲೀಸ್ ಕಾವಲು ಹಾಕಲಾಗಿದೆ.