ಬೆಂಗಳೂರು: ಶ್ರೀ ವಿಷ್ಣು ಯೋಗ ನಿದ್ರೆಯಿಂದ ಎಚ್ಚರಗೊಳ್ಳುವ ಪುಣ್ಯದಿನ ಎನಿಸಿರುವ ‘ವೈಕುಂಠ ಏಕಾದಶಿ’ ಆಚರಣೆಗೆ ರಾಜಧಾನಿ ಸಜ್ಜಾಗಿದ್ದು, ಶ್ರೀವೆಂಕಟೇಶ್ವರ ಹಾಗೂ ಶ್ರೀಕೃಷ್ಣ ದೇವಾಲಯಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.
ನಗರದ ತಿರುಮಲ ತಿರುಪತಿ ದೇವಾಲಯದಲ್ಲಿ (ಟಿಟಿಡಿ) ವೈಕುಂಠ ದ್ವಾರದ ಮೂಲಕ ಸ್ವಾಮಿಯ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಹಬ್ಬದ ಪ್ರಯುಕ್ತ ಸ್ವಾಮಿಗೆ ವಿಶೇಷ ಆಭರಣ ಹಾಗೂ ಹೂಗಳ ಅಲಂಕಾರ ಇರಲಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದವಾಗಿ ತಿರುಪತಿಯಿಂದ ಲಡ್ಡು ತರಿಸಲಾಗಿದೆ.
ಏಕಾದಶಿ ಪ್ರಯುಕ್ತ ಶನಿವಾರ (ಡಿ.23) ನಸುಕಿನ 2 ಗಂಟೆಯಿಂದಲೇ ಟಿಟಿಡಿಯಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಬಾರಿ 1.10 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, 65 ವರ್ಷ ಮೇಲ್ಪಟ್ಟ ಹಿರಿಯ ಭಕ್ತರು, ಅಂಗವಿಕಲರು ಆಧಾರ್ ಕಾರ್ಡ್ ತೋರಿಸಿದಲ್ಲಿ ವಿವಿಐಪಿ ದ್ವಾರದ ಮೂಲಕ ಪ್ರವೇಶ ಕಲ್ಪಿಸಲಾಗುವುದು. ಸ್ಥಳದಲ್ಲೇ 200 ರೂ. ನೀಡಿ ನೋಂದಣಿ ಮಾಡಿಸಿದವರಿಗೆ ವಿಶೇಷ ಪ್ರವೇಶ ಲಭ್ಯವಾಗಲಿದೆ.
ದೇವಾಲಯದಲ್ಲಿ ಭಕ್ತರಿಗೆ ಬೆಳಗ್ಗೆಯಿಂದ ಸಂಜೆವರೆಗೆ ದೊನ್ನೆಯ ಅನ್ನಪ್ರಸಾದ ವ್ಯವಸ್ಥೆ ಇರಲಿದೆ. ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಗೃಹ ವ್ಯವಸ್ಥೆ, ಆಂಬುಲೆನ್ಸ್ ಸೇವೆ ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ದೇವಾಲಯದ ಆಡಳಿತ ಮಂಡಳಿ ಮುಖ್ಯಸ್ಥರು ತಿಳಿಸಿದ್ದಾರೆ.
ಇಸ್ಕಾನ್‌ನಲ್ಲೂ ವಿಶೇಷ ದರ್ಶನ: ಇಸ್ಕಾನ್ ದೇವಾಲಯಗಳಾದ ಹರೇ ಕೃಷ್ಣಗಿರಿ ಮತ್ತು ವೈಕುಂಠಗಿರಿಯಲ್ಲಿ ವೇದ ಮಂತ್ರ ಪಠಣ, ಕೀರ್ತನೆಗಳು ಸೇರಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವೈಕುಂಠ ದ್ವಾರ ನಿರ್ಮಿಸಿ ಭಕ್ತರಿಗೆ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಭಕ್ತರಿಗಾಗಿ 80 ಸಾವಿರಕ್ಕೂ ಅಧಿಕ ಲಡ್ಡು ಪ್ರಸಾದ ಹಾಗೂ ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅನ್ನ ಪ್ರಸಾದಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಮುಂಜಾನೆ 3ಕ್ಕೆ ಸುಪ್ರಭಾತ ಸೇವೆ: ಇಸ್ಕಾನ್‌ನ ಹರೇ ಕೃಷ್ಣ ಗಿರಿಯ ಶ್ರೀ ಶ್ರೀನಿವಾಸ ಗೋವಿಂದ ಹಾಗೂ ವೈಕುಂಠ ಗಿರಿಯ ಶ್ರೀ ರಾಜಾಧಿರಾಜ ಗೋವಿಂದರಿಗೆ ಶನಿವಾರ ಮುಂಜಾನೆ 3 ಗಂಟೆಯಿಂದ ಸುಪ್ರಭಾತ ಸೇವೆ ಆರಂಭವಾಗಲಿದೆ. ದೇವರಿಗೆ ಹೊಸ ವಸ ಹಾಗೂ ಸುಗಂಧಭರಿತ ಹೂ ಮಾಲೆಗಳಿಂದ ಭವ್ಯ ಅಲಂಕಾರ ಮಾಡಲಾಗುತ್ತದೆ. ಶ್ರೀ ಕೃಷ್ಣ, ರುಕ್ಮಿಣಿ ಮತ್ತು ಸತ್ಯಭಾಮೆಯರ ಕಲ್ಯಾಣೋತ್ಸವ ನಡೆಯಲಿದೆ. ದಿನವಿಡೀ ಶ್ರೀ ಕೃಷ್ಣನ ಲಕ್ಷ ನಾಮಸ್ಮರಣೆ ಜಪರಿಸುವ ಮೂಲಕ ಲಕ್ಷಾರ್ಚನೆ ಸೇವೆ ಮಾಡಲಾಗುವುದು. ಶ್ರೀ ರಾಜಾಧಿರಾಜ ಗೋವಿಂದ ಹಾಗೂ ರಾಜಲಕ್ಷ್ಮೀ ಪದ್ಮಾವತಿ ದೇವಿಗೆ ಕುಂಕುಮಾರ್ಚನೆ ಸೇವೆ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಇಸ್ಕಾನ್‌ನ ವೆಬ್‌ಸೈಟ್‌ನಲ್ಲಿ (ಡಿಡಿಡಿ.ಜಿಝ್ಚಟ್ಞಚಿಚ್ಞಜಚ್ಝಟ್ಟಛಿ.ಟ್ಟಜ) ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ.
ಕೋಟೆ ದೇಗುದಲ್ಲೂ ಭರದ ಸಿದ್ಧತೆ: ವೈಕುಂಠ ಏಕಾದಶಿ ಪ್ರಯುಕ್ತ ಮುಜರಾಯಿ ಇಲಾಖೆಗೆ ಸೇರಿದ ಕೋಟೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ದ್ವಾರ ನಿರ್ಮಾಣ ಸೇರಿ ಭಕ್ತರಿಗೆ ಸರತಿ ಸಾಲಿನ ವ್ಯವಸ್ಥೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶನಿವಾರ ಮುಂಜಾನೆ 2.30ಕ್ಕೆ ದೇವಾಲಯದ ಆವರಣದಲ್ಲಿ ಸ್ವಾಮಿಯ ಉತ್ಸವ ನಡೆಯಲಿದೆ. 4 ಗಂಟೆಗೆ ಮಹಾಮಂಗಳಾರತಿ ನಂತರ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.